
ಬಾಗಲಕೋಟೆ, 02 ಅಕ್ಟೋಬರ್ (ಹಿ.ಸ.)
ಬಾದಾಮಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಆಯೋಜಿಸಿದ್ದ ಸ್ವಚ್ಛ ಭಾರತ ಅಭಿಯಾನದಲ್ಲಿ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಸ್ವಚ್ಛತಾ ಕಾರ್ಯ ಕೈಗೊಂಡರು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಸ್ವಚ್ಛತೆ, ಶಿಸ್ತು, ಸರಳತೆ ಹಾಗೂ ಸೇವಾ ಮನೋಭಾವದ ಸಂದೇಶಗಳನ್ನು ಸ್ಮರಿಸಲಾಯಿತು. ಸ್ವಚ್ಛತೆ ಎಂಬುದು ಕೇವಲ ವೈಯಕ್ತಿಕ ಜವಾಬ್ದಾರಿಯಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ನೀಡಿದ್ದ ಮಹತ್ವವನ್ನು ಸ್ಮರಿಸಿದ ಯುವ ಮೋರ್ಚಾ ಸದಸ್ಯರು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗಾಂಧೀಜಿಯವರ ಆಶಯಗಳನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.
ಸ್ವಚ್ಛ ಪರಿಸರವು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಮುಖ ಆಧಾರವಾಗಿದ್ದು, ಸ್ವಚ್ಛತೆಯ ಅಭ್ಯಾಸವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇಶದ ಮಾಜಿ ಪ್ರಧಾನಿ ಹಾಗೂ ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ದೇಶಸೇವೆ, ಸರಳತೆ, ಶಿಸ್ತು ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ಅವರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಂಡು ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬ ಸಂದೇಶವನ್ನು ನೀಡಲಾಯಿತು.
ಬಾದಾಮಿ ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳು ಇಂದಿನ ಯುವಜನತೆಗೆ ಸದಾ ಪ್ರೇರಣೆಯಾಗಿವೆ. ಸ್ವಚ್ಛತೆ, ಶಿಸ್ತು ಮತ್ತು ಸೇವೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನವನ್ನು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ನಿರಂತರವಾಗಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳು, ರಸ್ತೆಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಮತ್ತು ಸುಂದರ ಬಾದಾಮಿ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ನಾಗರಾಜ ಕಾಚಟ್ಟಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಡಲ ಪದಾಧಿಕಾರಿಗಳು, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande