ಆರು ತಿಂಗಳಲ್ಲೇ ಹದಗೆಟ್ಟ ₹2 ಕೋಟಿ ವೆಚ್ಚದ ಸಿಸಿ ರಸ್ತೆ:ಸಾರ್ವಜನಿಕರ ಆಕ್ರೋಶ
ವಿಜಯಪುರ, 02 ಅಕ್ಟೋಬರ್ (ಹಿ.ಸ.) ಸಿಂದಗಿ ನಗರದ ವಿವೇಕಾನಂದ ವೃತ್ತದಿಂದ ಶಾಂತವೀರ ನಗರದವರೆಗೆ ನೂತನವಾಗಿ ನಿರ್ಮಿಸಲಾಗಿರುವ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡು ಕೇವಲ ಆರು ತಿಂಗಳು ಕಳೆದಿರುವುದೇ, ರಸ್ತೆ ಹಾಗೂ ಪಾದಚಾರಿ ಮಾರ್ಗದ ಸ್ಥಿತಿ ಹದಗೆಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗ
ಕಳಪೆ ಕಾಮಗಾರಿ


ವಿಜಯಪುರ, 02 ಅಕ್ಟೋಬರ್ (ಹಿ.ಸ.)

ಸಿಂದಗಿ ನಗರದ ವಿವೇಕಾನಂದ ವೃತ್ತದಿಂದ ಶಾಂತವೀರ ನಗರದವರೆಗೆ ನೂತನವಾಗಿ ನಿರ್ಮಿಸಲಾಗಿರುವ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡು ಕೇವಲ ಆರು ತಿಂಗಳು ಕಳೆದಿರುವುದೇ, ರಸ್ತೆ ಹಾಗೂ ಪಾದಚಾರಿ ಮಾರ್ಗದ ಸ್ಥಿತಿ ಹದಗೆಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ವ್ಯಯಿಸಲಾಗಿದೆ ಎನ್ನಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ವಿವಿಧೆಡೆ ಸಮಸ್ಯೆಗಳು ಕಾಣಿಸಿಕೊಂಡಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಶೇಷವಾಗಿ ರಸ್ತೆಯ ಪಕ್ಕದಲ್ಲಿರುವ ಪಾದಚಾರಿ ಮಾರ್ಗದ ಹಲವು ಕಡೆಗಳಲ್ಲಿ ಗುಂಡಿಗಳು ಬಾಯ್ತೆರೆದುಕೊಂಡಿದ್ದು, ಸಾರ್ವಜನಿಕರು ಹಾಗೂ ಪಾದಚಾರಿಗಳು ಆತಂಕದಿಂದ ಸಂಚರಿಸುವಂತಾಗಿದೆ. ಕೆಲವು ಕಡೆಗಳಲ್ಲಿ ಪಾದಚಾರಿ ಮಾರ್ಗದ ಮೇಲ್ಮೈ ಹಾಳಾಗಿದ್ದು, ಗುಂಡಿಗಳು ಹಾಗೂ ಅಸಮರ್ಪಕ ಕಾಮಗಾರಿಯಿಂದ ಅಪಘಾತದ ಅಪಾಯವೂ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು ಹಾಗೂ ಮಹಿಳೆಯರು ಸೇರಿದಂತೆ ಅನೇಕರು ಈ ಮಾರ್ಗವನ್ನು ಬಳಸುತ್ತಾರೆ. ಇಂತಹ ಪ್ರಮುಖ ರಸ್ತೆಯ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಹದಗೆಟ್ಟಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಸ್ಥಳೀಯ ನಿವಾಸಿ ಮಹದೇವಪ್ಪ ಕಿರೀಸೂರು ಅವರು ಮಾತನಾಡಿ, ರಸ್ತೆ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಅನುದಾನ ವ್ಯಯವಾಗಿದೆ. ಆದರೆ ಕಾಮಗಾರಿ ಮುಗಿದು ಆರು ತಿಂಗಳು ಕಳೆಯುವಷ್ಟರಲ್ಲೇ ರಸ್ತೆ ಹಾಗೂ ಪಾದಚಾರಿ ಮಾರ್ಗದ ಸ್ಥಿತಿ ಹದಗೆಟ್ಟಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗುವ ರಸ್ತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಕನಿಷ್ಠ ಹಲವು ವರ್ಷಗಳವರೆಗೆ ರಸ್ತೆ ಸುಸ್ಥಿತಿಯಲ್ಲಿ ಇರಬೇಕಾದ ಅಗತ್ಯವಿದೆ. ಆದರೆ ಇಲ್ಲಿ ಕಡಿಮೆ ಅವಧಿಯಲ್ಲೇ ಸಮಸ್ಯೆಗಳು ಕಾಣಿಸಿಕೊಂಡಿರುವುದರಿಂದ ಕಾಮಗಾರಿಯ ಗುಣಮಟ್ಟ, ಬಳಸಿರುವ ಸಾಮಗ್ರಿಗಳು ಹಾಗೂ ಕಾಮಗಾರಿ ಮೇಲ್ವಿಚಾರಣೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ರಸ್ತೆ ನಿರ್ಮಾಣಕ್ಕೆ ಎಷ್ಟು ಅನುದಾನ ಮಂಜೂರಾಗಿತ್ತು, ಕಾಮಗಾರಿಯ ಅಂದಾಜು ಮೊತ್ತ ಎಷ್ಟು, ಗುತ್ತಿಗೆದಾರರು ಯಾರು, ಯಾವ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ನಿರ್ವಹಣೆ ಮತ್ತು ದೋಷಪೂರಿತ ಕಾಮಗಾರಿಗೆ ಸಂಬಂಧಿಸಿದ ಹೊಣೆಗಾರಿಕೆ ಯಾರ ಮೇಲಿದೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಇದೇ ವೇಳೆ, ಪಾದಚಾರಿ ಮಾರ್ಗದಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ದುರಸ್ತಿ ಕಾಮಗಾರಿಯನ್ನು ಗುತ್ತಿಗೆದಾರರಿಂದಲೇ ಮಾಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande