ಯುವಕರು ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗದಾತರಾಗಬೇಕು: ಶೋಭಾ ಕರಂದ್ಲಾಜೆ
ಮೈಸೂರು, 19 ಅಕ್ಟೋಬರ್ (ಹಿ.ಸ.): ದೇಶದ ಯುವ ಸಮುದಾಯ ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೆ, ಉದ್ಯೋಗದಾತರಾಗಿ ರೂಪುಗೊಳ್ಳಬೇಕು. ಇಂದಿನ ಯುವಜನತೆಯೇ ದೇಶದ ಮುಂದಿನ ಕಾರ್ಯಶಕ್ತಿಯಾಗಿದ್ದು, ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿ, ವ್ಯಾಪಾರ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂ
ಶೋಭಾ ಕರಂದ್ಲಾಜೆ


ಮೈಸೂರು, 19 ಅಕ್ಟೋಬರ್ (ಹಿ.ಸ.):

ದೇಶದ ಯುವ ಸಮುದಾಯ ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೆ, ಉದ್ಯೋಗದಾತರಾಗಿ ರೂಪುಗೊಳ್ಳಬೇಕು. ಇಂದಿನ ಯುವಜನತೆಯೇ ದೇಶದ ಮುಂದಿನ ಕಾರ್ಯಶಕ್ತಿಯಾಗಿದ್ದು, ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿ, ವ್ಯಾಪಾರ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.

ಮೈಸೂರಿನ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ‘ವಿಕಸಿತ ಭಾರತದಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತದ ಕೌಶಲಪೂರ್ಣ ಯುವಜನತೆಯತ್ತ ಇಡೀ ವಿಶ್ವವೇ ಆಕರ್ಷಿತವಾಗುತ್ತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ದೇಶದ ಯುವಕರು ವಿವಿಧ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಕಾಯಕ, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸುವಲ್ಲಿ ಯುವಜನತೆ ಮಹತ್ವದ ಪಾತ್ರ ವಹಿಸಬೇಕು. ಯುವಕರು ತಮ್ಮ ಸಾಮರ್ಥ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಮತ್ತು ಜವಾಬ್ದಾರಿಯನ್ನು ತಿಳಿಸುವುದರ ಜತೆಗೆ, ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಕೊಡುಗೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಪ್ರದ್ಯುಮ್ನ ಕುಮಾರ್ ಸೇಠಿ, ಡೀನ್ ಪ್ರೊ. ಪ್ರತ್ಯೂಷ್ ಕುಮಾರ್ ಮಂಡಲ್ ಹಾಗೂ ಕಾರ್ಯಕ್ರಮದ ಸಂಯೋಜಕಿ ಪ್ರೊ. ಐ.ಪಿ. ಗೌರಮ್ಮ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande