ಇರಾನ್ನ ರಕ್ಷಣಾ ಸಚಿವರಾಗಿ ಮೆಹರ್ದಾದ್ ಅಖ್ಲಾಘಿ ಕೆತಾಬ್ಚಿ ನೇಮಕ: ಸಂಸತ್ತಿನ ಅನುಮೋದನೆ
ಟೆಹ್ರಾನ್ (ಇರಾನ್), 19 ಅಕ್ಟೋಬರ್ (ಹಿ.ಸ.): ಏರೋಸ್ಪೇಸ್ ತಂತ್ರಜ್ಞಾನ ಮತ್ತು ಸೇನಾ ಕೈಗಾರಿಕಾ ಉತ್ಪಾದನಾ ಕ್ಷೇತ್ರದ ತಜ್ಞ ಮೆಹರ್‌ದಾದ್ ಅಖ್ಲಾಘಿ ಕೆತಾಬ್ಚಿ ಅವರನ್ನು ಇರಾನ್‌ನ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅಮೆರಿಕದೊಂದಿಗಿನ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಆತಂಕದ ನಡುವೆಯೇ ಈ ನೇಮಕ
मेहरदाद अखलाघी केताबची। फोटो -  इंटरनेट मीडिया


ಟೆಹ್ರಾನ್ (ಇರಾನ್), 19 ಅಕ್ಟೋಬರ್ (ಹಿ.ಸ.):

ಏರೋಸ್ಪೇಸ್ ತಂತ್ರಜ್ಞಾನ ಮತ್ತು ಸೇನಾ ಕೈಗಾರಿಕಾ ಉತ್ಪಾದನಾ ಕ್ಷೇತ್ರದ ತಜ್ಞ ಮೆಹರ್‌ದಾದ್ ಅಖ್ಲಾಘಿ ಕೆತಾಬ್ಚಿ ಅವರನ್ನು ಇರಾನ್‌ನ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅಮೆರಿಕದೊಂದಿಗಿನ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಆತಂಕದ ನಡುವೆಯೇ ಈ ನೇಮಕ ನಡೆದಿದೆ.

68 ವರ್ಷದ ಅಖ್ಲಾಘಿ ಅವರ ನೇಮಕಕ್ಕೆ ಭಾನುವಾರ ನಡೆದ ಸಂಸತ್ತಿನ ಆನ್‌ಲೈನ್ ಸಭೆಯಲ್ಲಿ ಅನುಮೋದನೆ ದೊರೆತಿದೆ. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ಬಳಿಕ ಸಂಸತ್ತಿನ ಸಭೆಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಅಖ್ಲಾಘಿ ಅವರು ರಕ್ಷಣಾ ಮತ್ತು ಸಶಸ್ತ್ರ ಪಡೆಗಳ ಪೂರೈಕೆ ನಿರ್ವಹಣಾ ಸಚಿವಾಲಯದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅವರ ನೇಮಕದ ಪರವಾಗಿ 237 ಸಂಸದರು ಮತ ಚಲಾಯಿಸಿದರೆ, 15 ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.

ಅಲ್ ಜಝೀರಾ ವರದಿಯ ಪ್ರಕಾರ, ಈ ಹಿಂದೆ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಮಜೀದ್ ಇಬ್ನ್-ಎ ರೆಜಾ ಅವರು ಇದೀಗ ಅಖ್ಲಾಘಿ ಅವರ ಉಪಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಂದ ತೀವ್ರ ಹಾನಿಗೊಳಗಾಗಿರುವ ಇರಾನ್‌ನ ಸೇನಾ ಕೈಗಾರಿಕಾ ವ್ಯವಸ್ಥೆಯನ್ನು ಪುನರ್‌ನಿರ್ಮಿಸುವುದು ಮತ್ತು ಅದರ ಸಾಮರ್ಥ್ಯವನ್ನು ವಿಸ್ತರಿಸುವುದು ನೂತನ ಸಚಿವರ ಮುಂದಿರುವ ಪ್ರಮುಖ ಜವಾಬ್ದಾರಿಯಾಗಿದೆ. ಅಖ್ಲಾಘಿ ಅವರ ರಕ್ಷಣಾ ಯೋಜನೆಗಳಿಗೆ ಈಗಾಗಲೇ ಹಿರಿಯ ಸೇನಾಧಿಕಾರಿಗಳು, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹಾಗೂ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗ ಅನುಮೋದನೆ ನೀಡಿವೆ.

ಇರಾನ್ ಯಾವುದೇ ದೇಶದ ವಿರುದ್ಧ ಆಕ್ರಮಣ ಆರಂಭಿಸುವುದಿಲ್ಲ. ಆದರೆ, ತನ್ನ ಮೇಲೆ ದಾಳಿ ನಡೆದರೆ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸಂಪೂರ್ಣ ಶಕ್ತಿಯೊಂದಿಗೆ ಕೊನೆಯ ಉಸಿರಿರುವವರೆಗೂ ಹೋರಾಡಲಿದೆ ಎಂದು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಅಖ್ಲಾಘಿ ಅವರು ರಕ್ಷಣಾ ಸಚಿವಾಲಯ ಮತ್ತು ಅದರ ಅಧೀನ ಸಂಸ್ಥೆಗಳಲ್ಲಿ 42 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಸರ್ಕಾರಿ ಮಾಧ್ಯಮಗಳ ಪ್ರಕಾರ, ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಘನ ಇಂಧನ ಚಾಲನಾ ತಂತ್ರಜ್ಞಾನ, ಏರೋಸ್ಪೇಸ್ ತಂತ್ರಜ್ಞಾನ ಮತ್ತು ಸೇನಾ ಕೈಗಾರಿಕಾ ಉತ್ಪಾದನೆ ಅವರ ಪ್ರಮುಖ ಪರಿಣತಿ ಕ್ಷೇತ್ರಗಳಾಗಿವೆ.

ಇದಕ್ಕೂ ಮೊದಲು ಅಖ್ಲಾಘಿ ಅವರು ಶಹೀದ್ ಬಘೇರಿ ಕೈಗಾರಿಕಾ ಸಮೂಹ, ಏರೋಸ್ಪೇಸ್ ಕೈಗಾರಿಕೆಗಳ ಸಂಸ್ಥೆ ಹಾಗೂ ರಕ್ಷಣಾ ಕೈಗಾರಿಕೆಗಳ ಸಂಸ್ಥೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅಖ್ಲಾಘಿ ಮತ್ತು ಈ ಸಂಸ್ಥೆಗಳು ಅಮೆರಿಕದ ನಿರ್ಬಂಧಗಳಿಗೆ ಒಳಪಟ್ಟಿವೆ. ಅವರ ಮೇಲೆ ವಿಶ್ವಸಂಸ್ಥೆಯ ನಿರ್ಬಂಧಗಳೂ ಅನ್ವಯಿಸುತ್ತವೆ.

ತಸ್ನೀಮ್ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಕಳೆದ ಹಲವು ದಶಕಗಳಲ್ಲಿ ವಿವಿಧ ಬಗೆಯ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳ ಅಭಿವೃದ್ಧಿ ಯೋಜನೆಗಳಲ್ಲಿ ಅಖ್ಲಾಘಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇರಾನ್‌ನ ಪ್ರಮುಖ ಸಜ್ಜಿಲ್ ಮತ್ತು ಜೊಲ್ಫಘಾರ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಾಮರ್ಥ್ಯ ವಿಸ್ತರಣೆ ಹಾಗೂ ಅಲ್ಮಾಸ್ ಕ್ಷಿಪಣಿಗಳು ಮತ್ತು ಯಾಸಿನ್ ನಿರ್ದೇಶಿತ ಬಾಂಬ್‌ಗಳಂತಹ ನಿಖರ ಗುರಿ ತಲುಪುವ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಬಾಹ್ಯಾಕಾಶ ಉಡಾವಣಾ ವಾಹನಗಳು, ಸಂಶೋಧನಾ ರಾಕೆಟ್‌ಗಳು ಹಾಗೂ ಸೆಮ್ನಾನ್‌ನಲ್ಲಿರುವ ಇಮಾಮ್ ಖೊಮೇನಿ ಬಾಹ್ಯಾಕಾಶ ಕೇಂದ್ರಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಕುರಿತು ಅಖ್ಲಾಘಿ ಪರಿಣತಿ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇರಾನ್‌ನ ಸೇನಾ ಸಾಮರ್ಥ್ಯದಲ್ಲಿ ಈ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande