ಪಾಕಿಸ್ತಾನ ತನ್ನ ಉದ್ದೇಶ ಸಾಧನೆಗೆ ಒಐಸಿ ಸಂಘಟನೆಯನ್ನು ದುರ್ಬಳಕೆ ಮಾಡಿಕೊಂಡಿದೆ: ವಿದೇಶಾಂಗ ಸಚಿವಾಲಯ
ನವದೆಹಲಿ, 19 ಅಕ್ಟೋಬರ್ (ಹಿ.ಸ.): ಬಾಗ್ದಾದ್‌ನಲ್ಲಿ ಅಕ್ಟೋಬರ್ 17 ಮತ್ತು 18ರಂದು ನಡೆದ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ವಿದೇಶಾಂಗ ಸಚಿವರ ಮಂಡಳಿ ಸಭೆಯ ನಿರ್ಣಯಗಳಲ್ಲಿ ಭಾರತದ ವಿರುದ್ಧ ಮಾಡಿರುವ ಉಲ್ಲೇಖಗಳನ್ನು ಭಾರತ ತಳ್ಳಿಹಾಕಿದೆ. ಈ ಉಲ್ಲೇಖಗಳು ದುರುದ್ದೇಶಪೂರಿತ, ಪಕ್ಷಪಾತಪೂರ್ಣ ಮತ್ತು ಸ
विदेश मंत्रालय के सचिव विक्रम मिसरी


ನವದೆಹಲಿ, 19 ಅಕ್ಟೋಬರ್ (ಹಿ.ಸ.):

ಬಾಗ್ದಾದ್‌ನಲ್ಲಿ ಅಕ್ಟೋಬರ್ 17 ಮತ್ತು 18ರಂದು ನಡೆದ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ವಿದೇಶಾಂಗ ಸಚಿವರ ಮಂಡಳಿ ಸಭೆಯ ನಿರ್ಣಯಗಳಲ್ಲಿ ಭಾರತದ ವಿರುದ್ಧ ಮಾಡಿರುವ ಉಲ್ಲೇಖಗಳನ್ನು ಭಾರತ ತಳ್ಳಿಹಾಕಿದೆ. ಈ ಉಲ್ಲೇಖಗಳು ದುರುದ್ದೇಶಪೂರಿತ, ಪಕ್ಷಪಾತಪೂರ್ಣ ಮತ್ತು ಸುಳ್ಳಿನಿಂದ ಕೂಡಿವೆ ಎಂದು ಹೇಳಿರುವ ಭಾರತ, ಪಾಕಿಸ್ತಾನ ತನ್ನ ಸೂಚನೆಯಂತೆ ಇವುಗಳನ್ನು ಸಿದ್ಧಪಡಿಸಿದೆ ಎಂದು ಆರೋಪಿಸಿದೆ. ಪಾಕಿಸ್ತಾನ ತನ್ನ ಮೂಲಭೂತವಾದಿ ಕಾರ್ಯಸೂಚಿಯನ್ನು ಮುಂದುವರಿಸಲು ಒಐಸಿ ಸಂಘಟನೆಯನ್ನು ಮತ್ತೊಮ್ಮೆ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಭಾರತ ಆಕ್ಷೇಪಿಸಿದೆ.

ವಿದೇಶಾಂಗ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತದ ಸಂಪೂರ್ಣ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸುವ ಯಾವುದೇ ಅಧಿಕಾರ ಒಐಸಿಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ರಾಜಕೀಯ ಉದ್ದೇಶದಿಂದ ನಡೆಸುವ ಅಪಪ್ರಚಾರದಿಂದ ಈ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕಲಂ 370 ರದ್ದುಗೊಳಿಸಿದ ನಂತರದ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಥಿಕ ಅಭಿವೃದ್ಧಿಯಾಗಿದೆ ಎಂದು ಸಚಿವಾಲಯ ಹೇಳಿದೆ. ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಸಂಪರ್ಕ ಸೌಲಭ್ಯಗಳ ಅಭಿವೃದ್ಧಿಯಿಂದ ಅಲ್ಲಿನ ಜನರಿಗೆ ನೇರ ಪ್ರಯೋಜನವಾಗಿದೆ ಎಂದು ವಿವರಿಸಿದೆ.

ಇದಕ್ಕೆ ವಿರುದ್ಧವಾಗಿ, ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ನಾಗರಿಕ ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರ, ದಮನ ಮತ್ತು ಕ್ರೌರ್ಯ ಎಸಗಲಾಗಿದೆ ಎಂದು ಭಾರತ ಆರೋಪಿಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಮೃತಪಟ್ಟಿದ್ದಾರೆ. ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸುವ ಮೂಲಕವೂ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳನ್ನು ಮುಚ್ಚಿಡಲು ಸಾಧ್ಯವಾಗಿಲ್ಲ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇನ್ನು ಬಾಕಿ ಉಳಿದಿರುವುದು ಕೇವಲ ಎರಡು ವಿಷಯಗಳು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಪಾಕಿಸ್ತಾನ ತಾನು ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಿಂದ ತನ್ನ ಹಿಡಿತವನ್ನು ತೆರವುಗೊಳಿಸಬೇಕು. ಅಲ್ಲದೆ, ಗಡಿಯಾಚೆಯಿಂದ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಇಸ್ಲಾಮೋಫೋಬಿಯಾ ಸೇರಿದಂತೆ ಭಾರತದ ವಿರುದ್ಧ ಒಐಸಿ ನಿರ್ಣಯಗಳಲ್ಲಿ ಮಾಡಿರುವ ಇತರ ಆಧಾರರಹಿತ ಮತ್ತು ಶತ್ರುತ್ವದ ಉಲ್ಲೇಖಗಳು ಪಾಕಿಸ್ತಾನದ ಹತಾಶ ಪ್ರಯತ್ನಗಳಾಗಿವೆ ಎಂದು ಭಾರತ ಹೇಳಿದೆ. ತನ್ನ ದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಕೋಮು ಹಿಂಸಾಚಾರ, ಆಡಳಿತ ವೈಫಲ್ಯಗಳು ಮತ್ತು ರಾಜಕೀಯ ಅಸ್ಥಿರತೆಯಿಂದ ಅಂತರರಾಷ್ಟ್ರೀಯ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದೆ.

ಪಾಕಿಸ್ತಾನ ಹರಡುತ್ತಿರುವ ದುರುದ್ದೇಶಪೂರಿತ ಪ್ರಚಾರ ಮತ್ತು ಅದರ ನಿರೂಪಣೆಗಳಿಗೆ ಒಐಸಿ ಪದೇಪದೆ ಬೆಂಬಲ ನೀಡುತ್ತಿರುವುದು ಸಂಘಟನೆಯ ವಿಶ್ವಾಸಾರ್ಹತೆ ಹಾಗೂ ನಿಷ್ಪಕ್ಷಪಾತದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಚಿವಾಲಯ ತಿಳಿಸಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಲು ಒಐಸಿ ಸದಸ್ಯ ರಾಷ್ಟ್ರಗಳು ಕ್ರಮ ಕೈಗೊಳ್ಳಲಿವೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದೆ.

ಒಐಸಿ ಹಿನ್ನೆಲೆ

ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಒಟ್ಟು 57 ಸದಸ್ಯ ರಾಷ್ಟ್ರಗಳಿವೆ. 1969ರ ಸೆಪ್ಟೆಂಬರ್ 25ರಂದು ಸ್ಥಾಪನೆಯಾದ ಈ ಸಂಘಟನೆಯ ಪ್ರಧಾನ ಕಚೇರಿ ಸೌದಿ ಅರೇಬಿಯಾದ ಜೆದ್ದಾದಲ್ಲಿದೆ. ಇದರ ಬಹುತೇಕ ಸದಸ್ಯ ರಾಷ್ಟ್ರಗಳು ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿವೆ. ಯುರೋಪ್‌ನ ಅಲ್ಬೇನಿಯಾ ಹಾಗೂ ದಕ್ಷಿಣ ಅಮೆರಿಕದ ಗಯಾನಾ ಮತ್ತು ಸುರಿನಾಮ್ ಕೂಡ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande