
ನವದೆಹಲಿ, 19 ಅಕ್ಟೋಬರ್ (ಹಿ.ಸ.):
ಶಾರದೀಯ ನವರಾತ್ರಿಯ ಒಂಬತ್ತನೇ ದಿನವಾದ ಮಹಾನವಮಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸೋಮವಾರ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿ, ದುರ್ಗಾಪೂಜೆಯ ಪವಿತ್ರ ಸಂದರ್ಭದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಹಾನವಮಿಯ ಶುಭಾಶಯಗಳನ್ನು ತಿಳಿಸುತ್ತಾ, ಗಂಧರ್ವರು, ಯಕ್ಷರು, ಇತರ ದಿವ್ಯ ಜೀವಿಗಳು, ಅಸುರರು ಮತ್ತು ಅಮರರು ಸದಾ ಸೇವೆಯಲ್ಲಿ ನಿರತರಾಗಿರುವ ದೇವಿ ಸಿದ್ಧಿದಾತ್ರಿಯು ಸಿದ್ಧಿಗಳನ್ನು ಕರುಣಿಸುವವಳು ಎಂದು ಹೇಳಿದ್ದಾರೆ. ಜ್ಞಾನ, ಸಾಧನೆ ಮತ್ತು ಸಿದ್ಧಿಯ ಅಧಿದೇವತೆಯಾದ ತಾಯಿ ಸಿದ್ಧಿದಾತ್ರಿಯ ದಿವ್ಯ ಸ್ವರೂಪವು ಜೀವನದಲ್ಲಿ ವಿವೇಕ, ಆಧ್ಯಾತ್ಮಿಕ ಪ್ರಜ್ಞೆ ಮತ್ತು ಆತ್ಮಜ್ಞಾನವನ್ನು ತುಂಬುತ್ತದೆ ಎಂದು ತಿಳಿಸಿದ್ದಾರೆ.
ತಾಯಿ ಭಗವತಿಯ ಅಪಾರ ಕೃಪೆಯಿಂದ ಪ್ರತಿಯೊಬ್ಬರ ಜೀವನವೂ ಜ್ಞಾನ, ಸಮತೋಲನ ಮತ್ತು ಧರ್ಮದಿಂದ ತುಂಬಿರಲಿ. ಭೌತಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕ ಉನ್ನತಿಯ ಹಾದಿಯೂ ಸುಗಮವಾಗಲಿ. ತಾಯಿ ಸಿದ್ಧಿದಾತ್ರಿಯ ಪವಿತ್ರ ಆಶೀರ್ವಾದವು ಇಡೀ ಜಗತ್ತಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಮಂಗಳವನ್ನು ಹರಡಲಿ ಹಾಗೂ ಎಲ್ಲ ಭಕ್ತರ ಮನದಾಸೆಗಳು ಈಡೇರಲಿ ಎಂದು ಅವರು ಹಾರೈಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಹಾನವಮಿಯ ಪವಿತ್ರ ಸಂದರ್ಭದಲ್ಲಿ ತಾಯಿ ದುರ್ಗೆಯು ಎಲ್ಲರಿಗೂ ನಿಜವಾದ ವಿವೇಕ, ತಿಳಿವಳಿಕೆ, ವಿನಯ ಮತ್ತು ಸತ್ಕರ್ಮಗಳ ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರತಿಯೊಬ್ಬರ ಸಾಧನೆಯೂ ಲೋಕಕಲ್ಯಾಣಕ್ಕೆ ಪೂರಕವಾಗಲಿ ಹಾಗೂ ಎಲ್ಲರ ಜೀವನವೂ ಸೇವೆ, ಭಕ್ತಿ ಮತ್ತು ಧರ್ಮದ ಮಾರ್ಗದಲ್ಲಿ ಸಾಗಲಿ. ತಾಯಿ ಸಿದ್ಧಿದಾತ್ರಿಯ ಅಪಾರ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ತಾಯಿ ದುರ್ಗೆಯ ಆಶೀರ್ವಾದವು ಎಲ್ಲ ನಾಗರಿಕರ ಜೀವನದಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದುರ್ಗಾದೇವಿಯ ಒಂಬತ್ತನೇ ಸ್ವರೂಪವಾದ ತಾಯಿ ಸಿದ್ಧಿದಾತ್ರಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸಿದ್ದು, ನಾಲ್ಕು ಭುಜಗಳನ್ನು ಹೊಂದಿರುವ ದೇವಿಯು ಎಲ್ಲರಿಗೂ ಸಿದ್ಧಿಗಳನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಗಂಧರ್ವರು, ಯಕ್ಷರು, ಇತರ ದೇವತೆಗಳು ಮತ್ತು ಅಸುರರಿಂದ ಪೂಜಿಸಲ್ಪಡುವ ತಾಯಿ ಸಿದ್ಧಿದಾತ್ರಿಯು ಎಲ್ಲ ಭಕ್ತರಿಗೂ ಸಿದ್ಧಿಗಳನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ. ಎಂಟು ಸಿದ್ಧಿಗಳು ಮತ್ತು ಒಂಬತ್ತು ನಿಧಿಗಳನ್ನು ಕರುಣಿಸುವ ಕರುಣಾಮಯಿ ದುರ್ಗಾದೇವಿಯ ಒಂಬತ್ತನೇ ಸ್ವರೂಪವಾದ ತಾಯಿ ಸಿದ್ಧಿದಾತ್ರಿಯ ಕೃಪೆಯಿಂದ ಎಲ್ಲರ ಜೀವನದಲ್ಲಿ ಗೌರವ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ನೆಲೆಸಲಿ. ಎಲ್ಲರ ಮನದಾಸೆಗಳು ಈಡೇರಲಿ ಹಾಗೂ ಇಡೀ ಸೃಷ್ಟಿಯ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು ನವರಾತ್ರಿಯ ಕೊನೆಯ ಹಾಗೂ ಅತ್ಯಂತ ಮಹತ್ವದ ದಿನವಾದ ಮಹಾನವಮಿಯಂದು ದುರ್ಗಾದೇವಿಯ ಒಂಬತ್ತನೇ ಸ್ವರೂಪವಾದ ತಾಯಿ ಸಿದ್ಧಿದಾತ್ರಿಯ ಆಶೀರ್ವಾದವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಶುಭ ಹಾರೈಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.