
ಮೈಸೂರು, 19 ಅಕ್ಟೋಬರ್ (ಹಿ.ಸ.):
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೈಭವಕ್ಕೆ ಮತ್ತೊಂದು ಗರಿ ಮೂಡಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಪ್ರದರ್ಶನದಲ್ಲಿ 3,473 ಡ್ರೋನ್ಗಳನ್ನು ಬಳಸಿ ಬಾನಂಗಳದಲ್ಲಿ ಬೃಹತ್ ನವಿಲಿನ ಆಕೃತಿಯನ್ನು ನಿರ್ಮಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಸಹಯೋಗದಲ್ಲಿ ನಡೆದ ಈ ಪ್ರದರ್ಶನವು ನಾಡಹಬ್ಬದ ಸಂಭ್ರಮಕ್ಕೆ ಆಧುನಿಕ ತಂತ್ರಜ್ಞಾನದ ಮೆರುಗು ನೀಡಿದೆ. ಅಕ್ಟೋಬರ್ 18ರ ರಾತ್ರಿ ನಡೆದ ಪ್ರದರ್ಶನದಲ್ಲಿ ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಆಕಾಶದಲ್ಲಿ ಮೂಡಿಬಂದ ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಭವ್ಯ ಆಕೃತಿ ಎಲ್ಲರ ಗಮನ ಸೆಳೆಯಿತು. ಬಹುವಾಹಕ ಡ್ರೋನ್ಗಳ ಮೂಲಕ ಪಕ್ಷಿಯೊಂದರ ಅತಿ ದೊಡ್ಡ ಆಕಾಶರೂಪವನ್ನು ನಿರ್ಮಿಸಿದ ಸಾಧನೆಗೆ ಗಿನ್ನೆಸ್ ವಿಶ್ವ ದಾಖಲೆಯ ಮಾನ್ಯತೆ ದೊರೆತಿದೆ. ಲಂಡನ್ನಿಂದ ಆಗಮಿಸಿದ್ದ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಪ್ರತಿನಿಧಿಗಳು ಸಾಧನೆಯನ್ನು ಪರಿಶೀಲಿಸಿ ಪ್ರಮಾಣಪತ್ರ ವಿತರಿಸಿದ್ದಾರೆ.
ಕಳೆದ ವರ್ಷವೂ ಮೈಸೂರು ದಸರಾ ಡ್ರೋನ್ ಪ್ರದರ್ಶನ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿತ್ತು. 2025ರಲ್ಲಿ 2,983 ಡ್ರೋನ್ಗಳನ್ನು ಬಳಸಿ ರಾಷ್ಟ್ರದ ಹೆಮ್ಮೆಯ ಪ್ರಾಣಿ ಹುಲಿಯ ಬೃಹತ್ ಆಕೃತಿಯನ್ನು ನಿರ್ಮಿಸಲಾಗಿತ್ತು. ಇದೀಗ 2026ರಲ್ಲಿ 3,473 ಡ್ರೋನ್ಗಳ ಮೂಲಕ ನವಿಲಿನ ಆಕೃತಿ ನಿರ್ಮಿಸುವ ಮೂಲಕ ಹಿಂದಿನ ಸಾಧನೆಯನ್ನು ಮೀರಿಸಲಾಗಿದೆ.
ದಸರಾ ಮಹೋತ್ಸವದ ಅಂಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಡ್ರೋನ್ ಪ್ರದರ್ಶನವು ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬೆಳಕಿನ ಚಿತ್ತಾರಗಳ ಮೂಲಕ ಆಕಾಶವನ್ನೇ ಪರದೆಯನ್ನಾಗಿಸಿಕೊಂಡು ವಿವಿಧ ಆಕೃತಿಗಳನ್ನು ಮೂಡಿಸುವ ಈ ಪ್ರದರ್ಶನವು ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಸಮನ್ವಯಕ್ಕೆ ಸಾಕ್ಷಿಯಾಗಿದೆ.
ಈ ಬಾರಿ ಡ್ರೋನ್ ಪ್ರದರ್ಶನದಲ್ಲಿ ನವಿಲಿನ ಆಕೃತಿಯೊಂದಿಗೆ ವಿವಿಧ ಆಕರ್ಷಕ ದೃಶ್ಯಗಳನ್ನೂ ಮೂಡಿಸಲಾಗಿದ್ದು, ದಸರಾ ಸಂಭ್ರಮಕ್ಕೆ ಹೊಸ ಆಯಾಮ ದೊರೆತಿದೆ. ಮೈಸೂರು ದಸರಾವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಗುರುತಿಸುವಂತೆ ಮಾಡಿದ ಈ ಸಾಧನೆಗೆ ಸೆಸ್ಕ್ ತಂಡಕ್ಕೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
ನಾಡಹಬ್ಬದ ವೈಭವವನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿರುವ ಈ ಐತಿಹಾಸಿಕ ಸಾಧನೆಯು ಮೈಸೂರಿನ ಸಾಂಸ್ಕೃತಿಕ ಹೆಮ್ಮೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೈಸೂರು ದಸರಾ ಡ್ರೋನ್ ಶೋನಲ್ಲಿ 3,473 ಡ್ರೋನ್ಗಳ ಮೂಲಕ ಆಕಾಶದಲ್ಲಿ ಅರಳಿದ ಬೃಹತ್ ನವಿಲಿನ ಆಕೃತಿ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. ಈ ಅಭೂತಪೂರ್ವ ಸಾಧನೆಯು ಸೆಸ್ಕ್ ಹಾಗೂ ಇಂಧನ ಇಲಾಖೆಯ ತಾಂತ್ರಿಕ ಸಾಮರ್ಥ್ಯ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದ್ದು, ನಾಡಹಬ್ಬದ ಸಂಭ್ರಮಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈ ಅದ್ಭುತ ಡ್ರೋನ್ ಪ್ರದರ್ಶನವು ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.