
ಕೋಲಾರ, 19 ಅಕ್ಟೋಬರ್ (ಹಿ.ಸ) : ಜಿಲ್ಲೆಯಲ್ಲಿ ವಿಜಯದಶಮಿ ಮತ್ತು ಆಯುಧಪೂಜೆಯ ಸಂಭ್ರಮ ಮನೆ ಮಾಡಿದೆ. ಬರದ ನಡುವೆಯು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂವು ಹಣ್ಣು ಬೆಲೆ ಗಗನಮುಖಿಯಾಗಿದ್ದರೂ ಸಹ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.
ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬದ ಅಂಗವಾಗಿ ಆಚರಿಸುವ ಆಯುಧ ಪೂಜೆಯನ್ನು ಕೋಲಾರ ಜಿಲ್ಲೆಯಲ್ಲಿ ಸಂಪ್ರದಾಯ, ಭಕ್ತಿ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಜೀವನೋಪಾಯಕ್ಕೆ ನೆರವಾಗುವ ಉಪಕರಣಗಳು, ವಾಹನಗಳು ಹಾಗೂ ಯಂತ್ರಗಳಿಗೆ ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷವಾಗಿದೆ. ರೈತಾಪಿ ವರ್ಗದಿಂದ ಹಿಡಿದು ವ್ಯಾಪಾರಿಗಳು, ಕಾರ್ಮಿಕರು, ವಾಹನ ಚಾಲಕರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸೋಮವಾರವೇ ಪೂಜೆ ಸಲ್ಲಿಸಲಾಯಿತು. ಕಛೇರಿಗಳಲ್ಲಿ ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಸಿಬ್ಬಂದಿವರೆಗೆ ಎಲ್ಲರೂ ತಮ್ಮ ವೃತ್ತಿಗೆ ಸಂಬಂಧಿಸಿದ ಸಾಧನಗಳನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುತ್ತಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುವ ನೇಗಿಲು, ಕುಂಟೆ, ಗುದ್ದಲಿ, ಪಂಪ್ಸೆಟ್ ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ, ಅರಿಶಿನ-ಕುಂಕುಮ ಹಚ್ಚಿ, ಹೂಮಾಲೆಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಅಂಗಡಿಗಳು, ವ್ಯಾಪಾರ ಮಳಿಗೆಗಳು, ಗ್ಯಾರೇಜ್ಗಳು ಮತ್ತು ಕಚೇರಿಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ಉಪಕರಣಗಳು, ಕಂಪ್ಯೂಟರ್ಗಳು, ಯಂತ್ರೋಪಕರಣಗಳು ಹಾಗೂ ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.
ದ್ವಿಚಕ್ರ ವಾಹನ, ಕಾರು, ಆಟೋ, ಟ್ರ್ಯಾಕ್ಟರ್ ಮತ್ತು ಸರಕು ಸಾಗಣೆ ವಾಹನಗಳನ್ನು ತೊಳೆದು, ಹೂವುಗಳಿಂದ ಅಲಂಕರಿಸಿ, ಕುಂಕುಮ ಹಚ್ಚಿ ಪೂಜಿಸುವುದು ಸಾಮಾನ್ಯವಾಗಿದೆ. ಮನೆಗಳಲ್ಲಿ ಪುಸ್ತಕಗಳು, ಲೇಖನ ಸಾಮಗ್ರಿಗಳು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದ ವಸ್ತುಗಳನ್ನು ಪೂಜೆಯಲ್ಲಿ ಇರಿಸಲಾಗುತ್ತದೆ. ಪೂಜೆಯ ಬಳಿಕ ಕುಟುಂಬದವರು, ಸ್ನೇಹಿತರು ಮತ್ತು ಕೆಲಸಗಾರರಿಗೆ ಸಿಹಿ-ತಿಂಡಿಗಳನ್ನು ಹಂಚಿ ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಾರೆ.
ಆಯುಧ ಪೂಜೆಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ನಮ್ಮ ಜೀವನಕ್ಕೆ ಆಸರೆಯಾಗಿರುವ ದುಡಿಮೆಯ ಸಾಧನಗಳನ್ನು ಗೌರವಿಸುವ ಸಂಪ್ರದಾಯವಾಗಿದೆ. ದುಡಿಮೆಯೇ ದೇವರು ಎಂಬ ಸಂದೇಶ ಸಾರುವ ಈ ಹಬ್ಬವು ಶ್ರಮದ ಮಹತ್ವವನ್ನು ಸಾರುವುದರ ಜೊತೆಗೆ, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳ ಬದುಕಿನಲ್ಲಿ ಹೊಸ ಉತ್ಸಾಹ ತುಂಬುತ್ತದೆ. ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕೋಲಾರ ಜಿಲ್ಲೆಯ ಜನರು ಆಯುಧ ಪೂಜೆಯ ಮಹತ್ವವನ್ನು ಸಾರುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್