
ಕೋಲಾರ, 19 ಅಕ್ಟೋಬರ್ (ಹಿ.ಸ) : ದೇವರಾಜ ಅರಸು ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿರುವ ದಿವಂಗತ ಆರ್.ಎಲ್.ಜಾಲಪ್ಪನವರು ದೇವರಾಜು ಅರಸು ನಂತರ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಆರ್.ಎಲ್. ಜಾಲಪ್ಪನವರು ದೇವರಾಜು ಅರಸು ರೀತಿಯಲ್ಲಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು. ಹಿಂದುಳಿದವರು, ದಲಿತರು, ಕಾರ್ಮಿಕರು ಮತ್ತು ರೈತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ದೇವರಾಜ ಅರಸು ರೀತಿಯಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಸಮ ಸಮಾಜ ನಿರ್ಮಿಸಬಹುದು ಎಂದು ನಂಬಿದ್ದರು ಎಂದು ಜಾಲಪ್ಪನವರ ಸಾಮಾಜಿಕ ಕಾಳಜಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.
ಕೋಲಾರ ನಗರದ ಹೊರವಲಯದ ಟಮಕ ಬಡಾವಣೆಯಲ್ಲಿರುವ ಶ್ರೀ ದೇವರಾಜ ಅರಸು ವೈದ್ಯಕೀಯ ಡೀಮ್ಡ್ ವಿಶ್ವವಿದ್ಯಾಲಯ ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಹಾಗೂ ಸಂಶೋದನಾ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ನಾನು ಈ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿಯಾಗಿದ್ದೆ. ಆದರೆ ಸಭೆಗಳಿಗೆ ಸಕಾಲದಲ್ಲಿ ಹಾಜರಾಗದ ಕಾರಣ ನನ್ನನ್ನು ಟ್ರಸ್ಟಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಈಗ ನನ್ನ ಮಗ ಯತೀಂದ್ರ ಟ್ರಸ್ಟಿಯಾಗಿದ್ದಾನೆ. ಜಾಲಪ್ಪ ಮತ್ತು ನಾನು ಒಂದೇ ಬಾರಿ ರಾಜಕೀಯ ಪ್ರವೇಶ ಮಾಡಿದೆವು. ದೇವೇಗೌಡರ ಸಂಪುಟದಲ್ಲಿ ಅವರು ಕಂದಾಯ ಸಚಿವರಾಗಿದ್ದರು. ನನಗೆ ಕಂದಾಯ ಸಚಿವನಾಗುವ ಆಸಕ್ತಿ ಇತ್ತು. ಆದರೆ ಜಾಲಪ್ಪನವರು ಪಟ್ಟು ಹಿಡಿದ ಕಾರಣ ಹಣಕಾಸು ಸಚಿವನಾದೆ ಎಂದು ತಮ್ಮ ರಾಜಕೀಯ ಪಯಣವನ್ನು ಸಿದ್ಧರಾಮಯ್ಯ ಮೆಲುಕು ಹಾಕಿದರು.
ಜೆಡಿಎಸ್ನಿಂದ ನನ್ನನ್ನು ಉಚ್ಚಾಟನೆ ಮಾಡಿದ ನಂತರ ದಾವಣೆಗೆರೆಯಲ್ಲಿ ಅಹಿಂದ ಸಮಾವೇಶ ಮಾಡಿದೆ. ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ನನಗೆ ಮೊದಲೇ ಜಾಲಪ್ಪ ಕಾಂಗ್ರೆಸ್ಗೆ ಹೋಗಿದ್ದರು. ಆದರೆ ಅವರು ಯಾವ ಪಕ್ಷಕ್ಕೆ ಹೋಗಲಿ ನನ್ನ ಬಗ್ಗೆ ಪ್ರೀತಿ ಹೊಂದಿದ್ದರು. ನಾನು ಮುಖ್ಯಮಂತ್ರಿಯಾದಾಗ ಸಂತಸಪಟ್ಟರು ಎಂದು ಜಾಲಪ್ಪನವರ ಒಡನಾಟವನ್ನು ಸ್ಮರಿಸಿದರು.
ವೈದ್ಯಕೀಯ ಸಚಿವ ಡಾ. ಶರಣ್ ಪಾಟೀಲ್ ಮಾತನಾಡಿ ಜಾಲಪ್ಪನವರು ರಾಜಕಾರಣದಲ್ಲಿ ಚಾಪು ಮೂಡಿಸಿದ್ದರು. ಬಡವರು ಮತ್ತು ಹಿಂದುಳಿದವರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಇದರಿಂದಾಗಿಯೇ ಅವರು ಕಾಲೇಜು ಆರಂಭಿಸಿದರು. ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ವೃತ್ತಿಪರ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ದೇವರಾಜು ಅರಸು ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಪಿ.ಹೆಚ್.ನಾಗರಾಜ್ ಮಾತನಾಡಿ ಇಡೀ ದೇಶದಲ್ಲಿಯೇ ಜಾಲಪ್ಪ ವೈದ್ಯಕೀಯ ಕಾಲೇಜು ಗುಣಮಟ್ಟದ ಸೇವೆಗೆ ಎಂಟನೇ ಸ್ಥಾನದಲ್ಲಿದೆ. ಬಡವರು ಮತ್ತು ನಿರ್ಗತಿಕರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಮೊದಲು ರೋಗಿಯ ಸೇವೆ, ಆನಂತರ ಹಣ ಪಾವತಿ ಎಂಬುದು ಸಂಸ್ಥೆಯ ಧ್ಯೇಯವಾಗಿದೆ ಎಂದು ತಿಳಿಸಿದರು.
ಅರಣ್ಯ ಮತ್ತು ಜೀವಿಶಾಸ್ತç ಸಚಿವ ಆರ್.ರಾಮಲಿಂಗಾರೆಡ್ಡಿ ಮಾತನಾಡಿದರು. ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಾಲೇಜು ಮತ್ತು ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್