ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ರಾಜಸ್ಥಾನದಲ್ಲಿ ಮೂವರು ಆರೋಪಿಗಳ ಬಂಧನ
ಮುಂಬೈ, 19 ಅಕ್ಟೋಬರ್ (ಹಿ.ಸ.): ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್
टाइगर श्रॉफ फायरिंग


ಮುಂಬೈ, 19 ಅಕ್ಟೋಬರ್ (ಹಿ.ಸ.):

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ತಿಳಿಸಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ಸೂರತ್‌ಗೆ ತೆರಳಿದ್ದರು. ಅಲ್ಲಿಂದ ಪುಣೆ–ಜೈಪುರ ರೈಲಿನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರ ದರೋಡೆಕೋರರ ವಿರುದ್ಧದ ವಿಶೇಷ ಕಾರ್ಯಪಡೆಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನು ರಾಜಸ್ಥಾನ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿತ್ತು. ಬಳಿಕ ಕೋಟಾ ಪೊಲೀಸರ ಸಹಕಾರದೊಂದಿಗೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳನ್ನು ಮುಂಬೈಗೆ ಕರೆತರಲು ಅಗತ್ಯ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಅವರನ್ನು ಮುಂಬೈಗೆ ಕರೆತಂದು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದರು.

ಏಳು ಸುತ್ತು ಗುಂಡಿನ ದಾಳಿ

ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಭಾನುವಾರ ಜುಹುವಿನ ಪುಷ್ಪಾ ಪಾರ್ಕ್ ಸಮೀಪ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಅಪರಿಚಿತರು ಏಳು ಸುತ್ತು ಗುಂಡು ಹಾರಿಸಿದ್ದರು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ದಾಳಿಕೋರರು ಸುಮಾರು 45 ನಿಮಿಷಗಳ ಕಾಲ ಅಲ್ಲಿ ಕಾದಿದ್ದರು. ಟೈಗರ್ ಶ್ರಾಫ್ ಕಾರಿನ ಬಳಿ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದರು.

ಹಾರಿಸಿದ ಏಳು ಗುಂಡಿಗಳ ಪೈಕಿ ಐದು ಗುರಿ ತಪ್ಪಿದ್ದವು. ಉಳಿದ ಎರಡು ಗುಂಡಿಗಳಲ್ಲಿ ಒಂದು ಟೈಗರ್ ಶ್ರಾಫ್ ಅವರ ಕಾರಿನ ಚಾಲಕನಿಗೆ ತಗುಲಿದ್ದು, ಮತ್ತೊಂದು ಆಟೊ ಚಾಲಕನಿಗೆ ತಗುಲಿದೆ. ಟೈಗರ್ ಶ್ರಾಫ್ ಅವರಿಗೆ ಸಣ್ಣ ತರಚಿದ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ದಾಳಿಯ ವೇಳೆ ಆರೋಪಿಯೊಬ್ಬನ ಪಿಸ್ತೂಲು ಇದ್ದಕ್ಕಿದ್ದಂತೆ ಸಿಲುಕಿಕೊಂಡಿದ್ದರಿಂದ ಅದರಿಂದ ಗುಂಡು ಹಾರಿಸಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿ ವಿವರಿಸಿದ್ದಾರೆ.

ತನಿಖೆಗೆ 15 ತಂಡಗಳ ರಚನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಹು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ 15 ತಂಡಗಳನ್ನು ರಚಿಸಿದ್ದಾರೆ. ದಾಳಿಗೆ ಬಳಸಿದ್ದ ದ್ವಿಚಕ್ರ ವಾಹನವನ್ನು ಅಂಧೇರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ವಾಹನಕ್ಕೆ ಮುಂಬೈ ನೋಂದಣಿ ಸಂಖ್ಯೆ ಇದ್ದು, ನೋಂದಣಿ ಫಲಕ ಹಾಗೂ ದಾಖಲೆಗಳ ಆಧಾರದಲ್ಲಿ ಅದರ ಹಿಂದಿನ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಘಟನಾ ಸ್ಥಳದಿಂದ ಅಂಧೇರಿ ನಿಲ್ದಾಣದವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಚಲನವಲನ ಹಾಗೂ ಅವರು ಪರಾರಿಯಾದ ಮಾರ್ಗವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande