
ಬೆಂಗಳೂರು, 18 ಅಕ್ಟೋಬರ್ (ಹಿ.ಸ.):
ವಿಕಲಚೇತನರಿಗೆ ಪಿಂಚಣಿ ನೀಡಲು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.
ರಾಮನಗರದಿಂದ ಬೆಂಗಳೂರಿನವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ನಡೆಸುತ್ತಿರುವ ವಿಕಲಚೇತನರು ಮತ್ತು ಗೌರವಧನ ಕಾರ್ಯಕರ್ತರ ಸಂಘದ ಹೋರಾಟಕ್ಕೆ ಬೆಂಬಲ ಸೂಚಿಸಿ, ಭಾನುವಾರ ಸಂಜೆ ಮೈಸೂರು ರಸ್ತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಷ್ಕರಣೆ ಮತ್ತು ಪರಿಶೀಲನೆಯ ನೆಪದಲ್ಲಿ ಗೌರವಧನ ತಡೆಹಿಡಿಯಲಾಗಿದೆ. ಕಳೆದ ಐದು ತಿಂಗಳಿಂದ ವಿಕಲಚೇತನರಿಗೆ ಪಿಂಚಣಿ ನೀಡಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಕೇವಲ ₹10 ಸಾವಿರ ಗೌರವಧನಕ್ಕೆ ಅವರಿಂದ ದುಡಿಸಿಕೊಳ್ಳಲಾಗುತ್ತಿದೆ.
ಇದರಿಂದ ಬೇಸತ್ತ ವಿಕಲಚೇತನರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
“ವಿಕಲಚೇತನರಿಗೆ ಪಿಂಚಣಿ ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ, ಅವರ ಪ್ರತಿಭಟನೆಯನ್ನು ಹತ್ತಿಕ್ಕಲು ಸಾವಿರಾರು ಪೊಲೀಸರನ್ನು ನಿಯೋಜಿಸಿದೆ.
ಪ್ರತಿಭಟನಾಕಾರರನ್ನು ತಡೆಯಲು ಸುಮಾರು 40 ಬಸ್ಗಳನ್ನು ಸಿದ್ಧಪಡಿಸಲಾಗಿದೆ. ಪಿಂಚಣಿ ನೀಡಲು ಸಾಧ್ಯವಾಗದಿದ್ದರೆ ಖಜಾನೆ ಖಾಲಿಯಾಗಿದೆ ಎಂಬ ಫಲಕ ಹಾಕಿಕೊಳ್ಳಲಿ” ಎಂದು ಅಶೋಕ ವಾಗ್ದಾಳಿ ನಡೆಸಿದರು.
“ವಿಕಲಚೇತನರು ಕಳೆದ 30 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಆಡಂಬರದಲ್ಲಿ ಮುಳುಗಿದೆ. ಸರ್ಕಾರದ ಆರ್ಥಿಕ ಸ್ಥಿತಿಯ ಬಣ್ಣ ಬಯಲು ಮಾಡಲು ನಾವು ಹೋರಾಟಕ್ಕೆ ಬೆಂಬಲ ನೀಡಿದ್ದೇವೆ. ಆರಂಭದಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿತ್ತು. ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸಿದರೂ, ಗೋಲಿಬಾರ್ ಮಾಡಿದರೂ 1,500ಕ್ಕೂ ಹೆಚ್ಚು ವಿಕಲಚೇತನರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದ ಅವರು, ಬಿಡದಿ ಮತ್ತು ಆನೇಕಲ್ ಭಾಗಗಳಲ್ಲಿ ರೈತರ ಜಮೀನುಗಳ ವಿಚಾರವಾಗಿ ಸರ್ಕಾರದ ವಿರುದ್ಧ ಆರೋಪ ಮಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣವನ್ನು ಪ್ರಸ್ತಾಪಿಸಿ, ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನಿಸಿದರು. ಬರ ಪರಿಹಾರದ ₹2,500 ಮೊತ್ತವನ್ನು ರೈತರು ಸರ್ಕಾರಕ್ಕೆ ಮರಳಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
“ಭಯೋತ್ಪಾದಕರು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ತಡೆಯಲು ಪೊಲೀಸರು ಕಾರ್ಯನಿರ್ವಹಿಸಬೇಕಿತ್ತು. ಆದರೆ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿಕಲಚೇತನರನ್ನು ಬಂಧಿಸಲು ಇಷ್ಟೊಂದು ಪೊಲೀಸರನ್ನು ನಿಯೋಜಿಸಿರುವುದು ಖಂಡನೀಯ. ಪೊಲೀಸರು ವಿಕಲಚೇತನರನ್ನು ಹೊತ್ತೊಯ್ಯುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾದರೆ ಸರ್ಕಾರಕ್ಕೆ ಮುಜುಗರವಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಕಲಚೇತನರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಆರ್. ಅಶೋಕ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R