ಪುಟ್ಟ ವಯಸ್ಸಿನಲ್ಲೇ ದೊಡ್ಡ ಸಾಧನೆ: ಶಿವಾನಿ ಬಿರಾದಾರಗೆ ಸಚಿವ ಎಂ.ಬಿ. ಪಾಟೀಲ್ ಅಭಿನಂದನೆ
ವಿಜಯಪುರ, 18 ಅಕ್ಟೋಬರ್ (ಹಿ.ಸ.) ಪುಟ್ಟ ವಯಸ್ಸಿನಲ್ಲೇ ಸೃಜನಶೀಲ ಬರವಣಿಗೆಯ ಮೂಲಕ ಗಮನ ಸೆಳೆದಿರುವ ವಿಜಯಪುರದ ಬಿ.ಎಂ. ಪಾಟೀಲ್ ಐಸಿಎಸ್ಇ ಶಾಲೆಯ 10 ವರ್ಷದ ಬಾಲಪ್ರತಿಭೆ ಶಿವಾನಿ ಬಿರಾದಾರ್ ಅವರ ಸಾಧನೆಗೆ ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಶಿವಾನಿ ಬಿರಾದಾ
ಪುಟ್ಟ ಪ್ರತಿಭೆ


ವಿಜಯಪುರ, 18 ಅಕ್ಟೋಬರ್ (ಹಿ.ಸ.)

ಪುಟ್ಟ ವಯಸ್ಸಿನಲ್ಲೇ ಸೃಜನಶೀಲ ಬರವಣಿಗೆಯ ಮೂಲಕ ಗಮನ ಸೆಳೆದಿರುವ ವಿಜಯಪುರದ ಬಿ.ಎಂ. ಪಾಟೀಲ್ ಐಸಿಎಸ್ಇ ಶಾಲೆಯ 10 ವರ್ಷದ ಬಾಲಪ್ರತಿಭೆ ಶಿವಾನಿ ಬಿರಾದಾರ್ ಅವರ ಸಾಧನೆಗೆ ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ಶಿವಾನಿ ಬಿರಾದಾರ್ ಅವರು ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ತಮ್ಮ ಸಾಧನೆಯ ಕುರಿತು ಹಂಚಿಕೊಂಡ ಸಂದರ್ಭದಲ್ಲಿ, ಬಾಲಕಿಯ ಪ್ರತಿಭೆ ಹಾಗೂ ಪರಿಸರದ ಮೇಲಿನ ಕಾಳಜಿಯನ್ನು ಕಂಡು ಸಚಿವರು ಸಂತಸ ವ್ಯಕ್ತಪಡಿಸಿದರು.

ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ‘Magic Tales for Little Hearts’ ಎಂಬ ಪುಸ್ತಕವನ್ನು ರಚಿಸಿರುವ ಶಿವಾನಿ, ಆ ಪುಸ್ತಕದಿಂದ ಬಂದ ₹10,000 ರಾಯಲ್ಟಿ ಹಣವನ್ನು ಪರಿಸರ ಜಾಗೃತಿ ಮತ್ತು ಸಂರಕ್ಷಣೆಯ ಸಂದೇಶ ಸಾರುವ ‘ವೃಕ್ಷಥಾನ್ ಹೆರಿಟೇಜ್ ರನ್’ಗೆ ದೇಣಿಗೆಯಾಗಿ ನೀಡಿರುವುದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ಪುಸ್ತಕ ಬರೆಯುವ ಮೂಲಕ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ, ಅದರಿಂದ ದೊರೆತ ಆದಾಯವನ್ನು ಸಮಾಜ ಮತ್ತು ಪರಿಸರದ ಒಳಿತಿಗಾಗಿ ವಿನಿಯೋಗಿಸಿರುವ ಶಿವಾನಿಯ ನಡೆ, ಬಾಲ್ಯದಲ್ಲೇ ಬೆಳೆಸಿಕೊಂಡಿರುವ ಸಾಮಾಜಿಕ ಜವಾಬ್ದಾರಿಯ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಶಿವಾನಿ ಬಿರಾದಾರ್ ಅವರು ವೃಕ್ಷಥಾನ್ ಹೆರಿಟೇಜ್ ರನ್ನಲ್ಲಿ ಭಾಗವಹಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ, ಹಸಿರು ಹೆಚ್ಚಿಸುವಿಕೆ ಹಾಗೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ವೃಕ್ಷಥಾನ್ನ ಆಶಯಗಳಿಂದ ಪ್ರೇರಿತರಾಗಿರುವ ಅವರು, ತಮ್ಮ ಪರಿಶ್ರಮದಿಂದ ಗಳಿಸಿದ ಹಣವನ್ನು ಇದೇ ಪರಿಸರ ಕಾರ್ಯಕ್ಕೆ ಸಮರ್ಪಿಸಿರುವುದು ಶ್ಲಾಘನೀಯವಾಗಿದೆ.

ಪುಸ್ತಕ ರಚನೆಯಂತಹ ಸೃಜನಶೀಲ ಕಾರ್ಯದ ಮೂಲಕ ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿರುವ ಶಿವಾನಿ, ಮತ್ತೊಂದೆಡೆ ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಇತರ ಮಕ್ಕಳಿಗೂ ಮಾದರಿಯಾಗಿದ್ದಾರೆ. ಪ್ರತಿಭೆ, ಪರಿಶ್ರಮ ಮತ್ತು ಸಾಮಾಜಿಕ ಕಳಕಳಿ ಒಂದೇ ಕಡೆ ಸೇರಿರುವುದು ಶಿವಾನಿಯ ಸಾಧನೆಯ ವಿಶೇಷತೆಯಾಗಿದೆ.

“ಚಿಕ್ಕ ವಯಸ್ಸಿನಲ್ಲೇ ಶಿವಾನಿಯಲ್ಲಿ ಅರಳಿರುವ ಸೃಜನಶೀಲತೆ, ಅದಮ್ಯ ಪರಿಶ್ರಮ ಮತ್ತು ಉದಾತ್ತ ಸಾಮಾಜಿಕ ಕಳಕಳಿ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ತಮ್ಮ ಪ್ರತಿಭೆಯಿಂದ ಪುಸ್ತಕ ರಚಿಸಿ, ಅದರಿಂದ ಬಂದ ರಾಯಲ್ಟಿಯನ್ನು ಪರಿಸರ ಸಂರಕ್ಷಣೆಗೆ ನೀಡಿರುವುದು ಮನದುಂಬುವಂತಹ ಕಾರ್ಯ,” ಎಂದು ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಾನಿಯ ಪ್ರತಿಭೆ, ಪರಿಶ್ರಮ ಮತ್ತು ಉದಾತ್ತ ಮನೋಭಾವಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಸಚಿವರು, ಅವರ ಮುಂದಿನ ಸಾಧನೆಯ ಹಾದಿ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ.

ಪುಟ್ಟ ವಯಸ್ಸಿನಲ್ಲಿಯೇ ಹೊಸತನದ ಚಿಂತನೆ, ಸೃಜನಶೀಲತೆ ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳುತ್ತಿರುವ ಇಂತಹ ಬಾಲಪ್ರತಿಭೆಗಳು ನಾಡಿನ ಹೆಮ್ಮೆ ಮಾತ್ರವಲ್ಲದೆ, ಭವಿಷ್ಯದ ಭರವಸೆಯೂ ಆಗಿದ್ದಾರೆ. ಶಿವಾನಿಯ ಈ ಸಾಧನೆ ಮತ್ತಷ್ಟು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಲು ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande