
ಹಾಸನ, 18 ಅಕ್ಟೋಬರ್ (ಹಿ.ಸ.):
2028ರಲ್ಲಿ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಖಚಿತ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಯಾವತ್ತೋ ಮುಗಿದುಹೋಗುತ್ತಿತ್ತು. ಅವರೊಂದಿಗೆ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದೇನೆ. ಆದರೆ ಈಗ ಸಿದ್ದರಾಮಯ್ಯ ಅವರನ್ನು ಮುಗಿಸಲು ಏನೆಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಗೊತ್ತಿದೆ ಎಂದರು.
ಹಾಸನಾಂಬೆ ದೇವಾಲಯದ ಬಾಗಿಲು ಶೀಘ್ರದಲ್ಲೇ ತೆರೆಯಲಿದ್ದು, ದೇವಾಲಯದಲ್ಲಿ ಕುಳಿತು ಎಲ್ಲ ವಿಚಾರಗಳ ಕುರಿತು ಮಾತನಾಡುತ್ತೇನೆ. ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಏಕೆ ಮೌನವಾಗಿದ್ದಾರೆ ಎಂಬುದೇ ನನಗೆ ಆಶ್ಚರ್ಯ ಉಂಟುಮಾಡಿದೆ ಎಂದು ತಿಳಿಸಿದರು.
ಸ್ಟಿಂಗ್ ಕಾರ್ಯಾಚರಣೆಯನ್ನು ನಾನೇ ಮಾಡಿದ್ದೇನೆ ಎಂದು ಸಂಬಂಧಪಟ್ಟ ವ್ಯಕ್ತಿಯೇ ಹೇಳಿಕೊಂಡಿದ್ದಾನೆ. ಹಾಗಾದರೆ ತನಿಖೆ ನಡೆಸಲು ಇನ್ನೇನು ದಾಖಲೆ ಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ಒತ್ತಾಯಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಎಷ್ಟು ಹೊತ್ತು ಇದ್ದರು, ಅವರ ದೇಹದ ಗುರುತು ಇದೆಯೇ ಎಂದು ಕಾರ್ಯಕರ್ತೆಯನ್ನು ಪ್ರಶ್ನಿಸಲಾಗುತ್ತಿದೆ. ಇಂತಹ ವ್ಯಕ್ತಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲವೇಕೆ? ಹಲವು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಕಾರ್ಯಾಚರಣೆಯನ್ನೂ ನಡೆಸಲಾಗಿದೆ ಎಂದು ಆರೋಪಿಸಿದರು.
ಹಲವು ನಾಯಕರ ಸ್ಟಿಂಗ್ ಕಾರ್ಯಾಚರಣೆ ನಡೆದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಜಣ್ಣ ಅವರೇ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ನ ಹಿರಿಯ ಶಾಸಕರ ಬಾಯಿ ಮುಚ್ಚಿಸಲಾಗಿದೆ. ಒಬ್ಬರು ಮಾಜಿ ಪ್ರಧಾನಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಗೃಹ ಸಚಿವರ ನಡೆ ಗಮನಿಸಿದರೆ ಇದರ ಹಿಂದೆ ಹುನ್ನಾರ ನಡೆದಿರುವಂತೆ ಕಾಣುತ್ತಿದೆ. ಮುಖ್ಯಮಂತ್ರಿ ಅವರಿಂದ ನಿರ್ದೇಶನ ಪಡೆದು ಪ್ರಿಯಾಂಕ್ ಖರ್ಗೆ ನನ್ನನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನನ್ನನ್ನು 'ಉತ್ತರ ಕುಮಾರ' ಎಂದು ಕರೆಯುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ಹಗರಣದ ಕುರಿತು ಎಲ್ಲ ಮಾಹಿತಿ ಇದ್ದರೂ, ದಾಖಲೆಗಳು ಎಲ್ಲಿವೆ ಎಂದು ಪ್ರಶ್ನಿಸುತ್ತಾರೆ. ಈ ಹಗರಣದ ವಿಚಾರದಲ್ಲಿ ಅವರ ಬಳಿ ಉತ್ತರವಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.