ನಮೋ ಭಾರತ್ ರೈಲು ಸೇವೆಗೆ ಮೂರು ವರ್ಷ: 4.5 ಕೋಟಿಗೂ ಅಧಿಕ ಪ್ರಯಾಣ
ನವದೆಹಲಿ, 18 ಅಕ್ಟೋಬರ್ (ಹಿ.ಸ.): ದೆಹಲಿ–ಗಾಜಿಯಾಬಾದ್–ಮೀರತ್ ನಮೋ ಭಾರತ್ ರೈಲು ಮಾರ್ಗದಲ್ಲಿ ಮೂರು ವರ್ಷಗಳ ಕಾರ್ಯಾಚರಣೆಯ ಅವಧಿಯಲ್ಲಿ 4.5 ಕೋಟಿಗೂ ಅಧಿಕ ಪ್ರಯಾಣಗಳು ದಾಖಲಾಗಿವೆ. ಪ್ರಸ್ತುತ ಪ್ರತಿದಿನ 1.1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ರೈಲು ಸೇವೆಯನ್ನು ಬಳಸುತ್ತಿದ್ದು, ಒಂದೇ ದಿನದಲ್ಲಿ ಸುಮಾ
नई दिल्ली में रविवार को नमो भारत दिवस 2026 के अवसर पर केंद्रीय आवासन एवं शहरी कार्य तथा विद्युत मंत्री मनोहर लाल, केंद्रीय राज्य मंत्री तोखन साहू और एनसीआरटीसी के वरिष्ठ अधिकारी।


ನವದೆಹಲಿ, 18 ಅಕ್ಟೋಬರ್ (ಹಿ.ಸ.):

ದೆಹಲಿ–ಗಾಜಿಯಾಬಾದ್–ಮೀರತ್ ನಮೋ ಭಾರತ್ ರೈಲು ಮಾರ್ಗದಲ್ಲಿ ಮೂರು ವರ್ಷಗಳ ಕಾರ್ಯಾಚರಣೆಯ ಅವಧಿಯಲ್ಲಿ 4.5 ಕೋಟಿಗೂ ಅಧಿಕ ಪ್ರಯಾಣಗಳು ದಾಖಲಾಗಿವೆ. ಪ್ರಸ್ತುತ ಪ್ರತಿದಿನ 1.1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ರೈಲು ಸೇವೆಯನ್ನು ಬಳಸುತ್ತಿದ್ದು, ಒಂದೇ ದಿನದಲ್ಲಿ ಸುಮಾರು 1.68 ಲಕ್ಷ ಪ್ರಯಾಣಿಕರು ಸಂಚರಿಸಿರುವುದು ದಾಖಲೆಯಾಗಿದೆ ಎಂದು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (ಎನ್‌ಸಿಆರ್‌ಟಿಸಿ) ತಿಳಿಸಿದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮವು ಭಾನುವಾರ ನಮೋ ಭಾರತ್ ದಿನಾಚರಣೆ–2026 ಆಚರಿಸಿತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಹಾಗೂ ವಿದ್ಯುತ್ ಸಚಿವ ಮನೋಹರ್ ಲಾಲ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು, ಸಚಿವಾಲಯದ ಕಾರ್ಯದರ್ಶಿ ಡಿ. ಥಾರಾ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಮೋ ಭಾರತ್ ಕೇವಲ ಹೆಸರಲ್ಲ; ರಾಷ್ಟ್ರಕ್ಕೆ ಆದ್ಯತೆ ನೀಡುವ, ಸಮರ್ಪಣಾ ಮನೋಭಾವ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಂಕೇತವಾಗಿದೆ ಎಂದು ಮನೋಹರ್ ಲಾಲ್ ಹೇಳಿದರು. ಈ ರೈಲು ಸೇವೆಯು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ ನಗರ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡುತ್ತಿದೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್ 20ರಂದು ಈ ರೈಲು ಮಾರ್ಗವನ್ನು ಉದ್ಘಾಟಿಸಿದ್ದರು. ಯೋಜನೆಯ ಅನುಷ್ಠಾನದಲ್ಲಿ ಶ್ರಮಿಸಿದ ಅಧಿಕಾರಿಗಳು, ಎಂಜಿನಿಯರ್‌ಗಳು, ತಾಂತ್ರಿಕ ತಜ್ಞರು ಮತ್ತು ಸಿಬ್ಬಂದಿಯ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು.

2023ರ ಅಕ್ಟೋಬರ್‌ನಲ್ಲಿ ಸಾಹಿಬಾಬಾದ್‌ನಿಂದ ದುಹಾಯಿ ಡಿಪೋವರೆಗಿನ 17 ಕಿ.ಮೀ. ಉದ್ದದ ಮೊದಲ ಹಂತದಲ್ಲಿ ನಮೋ ಭಾರತ್ ರೈಲು ಸಂಚಾರ ಆರಂಭವಾಗಿತ್ತು. ನಂತರ 82 ಕಿ.ಮೀ. ಉದ್ದದ ಸಂಪೂರ್ಣ ದೆಹಲಿ–ಗಾಜಿಯಾಬಾದ್–ಮೀರತ್ ಮಾರ್ಗವನ್ನು ಹಂತ ಹಂತವಾಗಿ ಕಾರ್ಯಾಚರಣೆಗೆ ತೆರೆಯಲಾಯಿತು. 2026ರ ಫೆಬ್ರವರಿ 22ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಪೂರ್ಣ ನಮೋ ಭಾರತ್ ರೈಲು ಮಾರ್ಗದ ಜೊತೆಗೆ ಮೀರತ್ ಮೆಟ್ರೋ ಸೇವೆಯನ್ನೂ ರಾಷ್ಟ್ರಕ್ಕೆ ಸಮರ್ಪಿಸಿದ್ದರು.

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇತರ ಸಾರಿಗೆ ವ್ಯವಸ್ಥೆಗಳೊಂದಿಗೆ ಸಂಪರ್ಕವನ್ನು ಸುಧಾರಿಸುವುದು ಹಾಗೂ ಪ್ರಯಾಣದ ಆರಂಭಿಕ ಮತ್ತು ಕೊನೆಯ ಹಂತದ ಸಂಚಾರವನ್ನು ಸುಗಮಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎನ್‌ಸಿಆರ್‌ಟಿಸಿ ತಿಳಿಸಿದೆ.

ಯೋಜನೆಯ ಪರಿಸರ ಸ್ನೇಹಿ ಸ್ವರೂಪ ಮತ್ತು ಆರ್ಥಿಕ ಸುಸ್ಥಿರತೆಯನ್ನು ಬಲಪಡಿಸಲು ‘ಸೋಲಾರ್ ಆನ್ ಟ್ರ್ಯಾಕ್’ ಉಪಕ್ರಮದಡಿ 110 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಎನ್‌ಸಿಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಲಭ್ ಗೋಯಲ್ ಮಾತನಾಡಿ, ಆಧುನಿಕ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ಪ್ರಾದೇಶಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಬ್ಬಂದಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

ದೆಹಲಿ–ಪಾಣಿಪತ್–ಕರ್ನಾಲ್ ಮತ್ತು ದೆಹಲಿ–ಗುರುಗ್ರಾಮ–ಬಹರೋಡ್ ನಮೋ ಭಾರತ್ ರೈಲು ಮಾರ್ಗಗಳಿಗೆ ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಎನ್‌ಸಿಆರ್‌ಟಿಸಿ ತಿಳಿಸಿದೆ. ಗಾಜಿಯಾಬಾದ್–ಜೆವಾರ್ ಮತ್ತು ನೋಯ್ಡಾ–ಫರೀದಾಬಾದ್–ಗುರುಗ್ರಾಮ ಮಾರ್ಗಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande