ನವರಾತ್ರಿ ಪೂಜೆ ವೇಳೆ ಗಲಾಟೆ: ಚಾಕು ಇರಿತಕ್ಕೆ ಯುವಕ ಸಾವು
ಬಾಗಲಕೋಟೆ, 18 ಅಕ್ಟೋಬರ್ (ಹಿ.ಸ.) ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೇವಿ ಘಟಸ್ಥಾಪನೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಮಾತನಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ವಿನಾಯಕ ನಗರದಲ್ಲಿ ಯುವಕರ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದ ಪರಿಣ
ಜೋರಾಗಿ ಮಾತಾಡಿದ್ದಕ್ಕೆ ಕೊಲೆ


ಬಾಗಲಕೋಟೆ, 18 ಅಕ್ಟೋಬರ್ (ಹಿ.ಸ.)

ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೇವಿ ಘಟಸ್ಥಾಪನೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಮಾತನಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ವಿನಾಯಕ ನಗರದಲ್ಲಿ ಯುವಕರ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ನಿತಿನ್ ನಿಂಬಾಳ್ಕರ್ (ಹೆಸರು) ಮೃತಪಟ್ಟಿದ್ದು, ಅವರ ಚಿಕ್ಕಪ್ಪ ಸಂಜು ನಿಂಬಾಳ್ಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿನಾಯಕ ನಗರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೇವಿ ಘಟಸ್ಥಾಪನೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀನಿವಾಸ ಕೊರವರ ಮತ್ತು ಶಿವಾನಂದ ಕಳ್ಳಿಮಠ ಜೋರಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಪೂಜೆಯ ಸಂದರ್ಭದಲ್ಲಿ ಶಾಂತವಾಗಿರುವಂತೆ ಹಾಗೂ ಜೋರಾಗಿ ಮಾತನಾಡದಂತೆ ನಿತಿನ್ ನಿಂಬಾಳ್ಕರ್ ಮತ್ತು ಅವರ ಚಿಕ್ಕಪ್ಪ ಸಂಜು ನಿಂಬಾಳ್ಕರ್ ಸೂಚಿಸಿದ್ದಾರೆ ಎನ್ನಲಾಗಿದೆ.

ಇದೇ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಳಿಕ ತೀವ್ರ ವಾಗ್ವಾದಕ್ಕೆ ತಿರುಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ನಂತರ ಶ್ರೀನಿವಾಸ ಕೊರವರ ತನ್ನ ಸಹಚರರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಬಳಿಕ ನಡೆದ ಗಲಾಟೆಯ ಸಂದರ್ಭದಲ್ಲಿ ನಿತಿನ್ ನಿಂಬಾಳ್ಕರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಕತ್ತು ಹಾಗೂ ಪಕ್ಕೆಲುಬಿನ ಭಾಗಕ್ಕೆ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ನಿತಿನ್ ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಅವರ ಚಿಕ್ಕಪ್ಪ ಸಂಜು ನಿಂಬಾಳ್ಕರ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಗಲಾಟೆ ಯುವಕನ ಸಾವಿಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಆರು ಮಂದಿ ಆರೋಪಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಕೊರವರ, ಪ್ರದೀಪ ಕಳ್ಳಿಮಠ, ಸಂಪತ್ ಕೊರವರ, ಸದಾ ದೇಸಾಯಿ, ಲೋಕೇಶ ಶಿರಗಾರ ಮತ್ತು ಬಸವರಾಜ ತೋಳಮಟ್ಟಿ ಎಂಬ ಆರು ಮಂದಿಯ ಹೆಸರುಗಳು ಆರೋಪಿಗಳಾಗಿ ಕೇಳಿಬಂದಿವೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಗೋಯೆಲ್ ಅವರು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಲಾಟೆಗೆ ನಿಖರ ಕಾರಣ, ಹಲ್ಲೆಯಲ್ಲಿ ಭಾಗಿಯಾದವರ ಪಾತ್ರ ಸೇರಿದಂತೆ ಪ್ರಕರಣದ ಸಂಪೂರ್ಣ ವಿವರಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande