ಕೋಲ್ಕತ್ತಾ ಪೂಜಾ ಮಂಟಪದಲ್ಲಿ ಕಾಲ್ತುಳಿತ:ಸಾವಿನ ಸಂಖ್ಯೆ 18ಕ್ಕೆ ಏರಿಕೆ, 12 ಮಂದಿ ವಶಕ್ಕೆ
ಕೋಲ್ಕತ್ತಾ, 18 ಅಕ್ಟೋಬರ್ (ಹಿ.ಸ.): ಪಶ್ಚಿಮ ಬಂಗಾಳದ ಕೋಲ್ಕತ್ತಾದ ಚೋರ್ಬಾಗಾನ್ ಸಾರ್ವಜನಿಕ ದುರ್ಗಾಪೂಜಾ ಮಂಟಪದಲ್ಲಿ ಮಹಾಸಪ್ತಮಿಯ ಸಂಜೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಭಾನುವಾರ ಬೆಳಗಿನ ವೇಳೆಗೆ 18 ಮಂದಿ ಮೃತಪಟ್ಟಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜನಸ
चोरबागान दुर्घटना


ಕೋಲ್ಕತ್ತಾ, 18 ಅಕ್ಟೋಬರ್ (ಹಿ.ಸ.):

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಚೋರ್ಬಾಗಾನ್ ಸಾರ್ವಜನಿಕ ದುರ್ಗಾಪೂಜಾ ಮಂಟಪದಲ್ಲಿ ಮಹಾಸಪ್ತಮಿಯ ಸಂಜೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಭಾನುವಾರ ಬೆಳಗಿನ ವೇಳೆಗೆ 18 ಮಂದಿ ಮೃತಪಟ್ಟಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜನಸಂದಣಿ ನಿಯಂತ್ರಣ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ತೋರಿದ ಶಂಕೆಯ ಮೇರೆಗೆ ಪೂಜಾ ಸಮಿತಿಯ ಆಯೋಜಕರು ಹಾಗೂ ಸ್ವಯಂಸೇವಕರು ಸೇರಿದಂತೆ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಆರೋಗ್ಯ ಸಚಿವ ಶಾರದ್ವತ ಮುಖೋಪಾಧ್ಯಾಯ ಅವರೊಂದಿಗೆ ಕೋಲ್ಕತ್ತಾ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಭಾರಿ ಮಳೆ, ಸಂಚಾರ ದಟ್ಟಣೆಯಿಂದ ಅವಘಡ

ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಮಹಾಸಪ್ತಮಿಯ ಸಂಜೆ ಏಕಾಏಕಿ ಭಾರಿ ಮಳೆ ಆರಂಭವಾಗಿತ್ತು. ಮಂಟಪದ ಹೊರಭಾಗದಲ್ಲಿ ತೀವ್ರ ಸಂಚಾರ ದಟ್ಟಣೆಯೂ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನೂರಾರು ಭಕ್ತರು ಏಕಕಾಲದಲ್ಲಿ ಮಂಟಪದೊಳಗೆ ಪ್ರವೇಶಿಸಲು ಯತ್ನಿಸಿದ್ದು, ಜನದಟ್ಟಣೆ ಹೆಚ್ಚಾಗಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಕೋಲ್ಕತ್ತಾ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ಕೋಲ್ಕತ್ತಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ನ್ಯಾಯಾಂಗ ತನಿಖೆಗೆ ಮನವಿ

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಕಲ್ಕತ್ತಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು, ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಿ ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಭಾನುವಾರ ದುರಂತದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಉಚ್ಚ ನ್ಯಾಯಾಲಯಕ್ಕೆ ಔಪಚಾರಿಕವಾಗಿ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವುದರ ಜೊತೆಗೆ, ಕುಟುಂಬದ ಒಬ್ಬ ಸದಸ್ಯರಿಗೆ ನಾಲ್ಕನೇ ದರ್ಜೆಯ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ ಐದು ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ, ಗಾಯಾಳುಗಳು ಆಯ್ಕೆ ಮಾಡಿಕೊಳ್ಳುವ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ವೈದ್ಯರ ಅಸಮಾಧಾನ

ದುರಂತದ ಬೆನ್ನಲ್ಲೇ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿನ ಸೌಲಭ್ಯಗಳ ಕೊರತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೂಲಸೌಕರ್ಯಗಳ ಕೊರತೆ ಕುರಿತು ಕಿರಿಯ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಗಾಯಾಳುಗಳ ಚಿಕಿತ್ಸೆಗೆ ಪ್ರತ್ಯೇಕ ಕೇಂದ್ರವೇ ಇಲ್ಲದಿರುವುದು ಆತಂಕಕಾರಿ ಸಂಗತಿ ಎಂದು ವೈದ್ಯರು ಆರೋಪಿಸಿದ್ದಾರೆ. ನರಶಸ್ತ್ರಚಿಕಿತ್ಸಾ ವಿಭಾಗದ ಸ್ಥಿತಿಯೂ ಶೋಚನೀಯವಾಗಿದೆ ಎಂದು ಅವರು ದೂರಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಏಳೆಂಟು ಗಾಯಾಳುಗಳನ್ನು ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ ಕ್ರಮದ ಬಗ್ಗೆಯೂ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನದಟ್ಟಣೆಯ ಒತ್ತಡದಿಂದ ಉಸಿರುಗಟ್ಟಿ ಹೆಚ್ಚಿನ ಸಾವುಗಳು ಸಂಭವಿಸಿರಬಹುದು ಎಂದು ಅವರು ಶಂಕಿಸಿದ್ದಾರೆ.

ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ

ದುರಂತಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ಅವರು ದುರಂತಕ್ಕೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕಳೆದ ವರ್ಷ ದುರ್ಗಾಪೂಜೆ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ 13 ಮಂದಿ ಮೃತಪಟ್ಟಿದ್ದ ಘಟನೆ ಹಾಗೂ ಡಾರ್ಜಿಲಿಂಗ್ನಲ್ಲಿ ಸಂಭವಿಸಿದ ಹಠಾತ್ ಪ್ರವಾಹ ದುರಂತಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಸದ್ಯ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದು ಮತ್ತು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande