ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಆಡಳಿತ ಮತ್ತು ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಬದಲಾವಣೆ
ನವದೆಹಲಿ, 18 ಅಕ್ಟೋಬರ್ (ಹಿ.ಸ.): ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನವೆಂಬರ್ 1ರಿಂದ ತನ್ನ ಆಡಳಿತ ಮತ್ತು ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತರಲಿದೆ. ಪ್ರಮುಖ ಮೂಲಸೌಕರ್ಯಗಳು ಹಾಗೂ ಕಾರ್ಯತಂತ್ರದ ಮಹತ್ವದ ಸಂಸ್ಥೆಗಳ ಭದ್ರತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿ
सीआईएसएफ (CISF)


ನವದೆಹಲಿ, 18 ಅಕ್ಟೋಬರ್ (ಹಿ.ಸ.):

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನವೆಂಬರ್ 1ರಿಂದ ತನ್ನ ಆಡಳಿತ ಮತ್ತು ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತರಲಿದೆ. ಪ್ರಮುಖ ಮೂಲಸೌಕರ್ಯಗಳು ಹಾಗೂ ಕಾರ್ಯತಂತ್ರದ ಮಹತ್ವದ ಸಂಸ್ಥೆಗಳ ಭದ್ರತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯವು ಈ ಬದಲಾವಣೆಗಳಿಗೆ ಅನುಮೋದನೆ ನೀಡಿದೆ.

ಕೈಗಾರಿಕಾ ವಲಯಗಳ ಆಧಾರದ ಮೇಲೆ ಭದ್ರತಾ ವಲಯಗಳನ್ನು ಪುನರ್‌ರಚಿಸಲು ಪಡೆ ನಿರ್ಧರಿಸಿದೆ. ವಿದ್ಯುತ್, ಕಲ್ಲಿದ್ದಲು, ಉಕ್ಕು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಸರ್ಕಾರಿ ಕಟ್ಟಡಗಳು, ವಸ್ತುಸಂಗ್ರಹಾಲಯಗಳು, ಸ್ಮಾರಕಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಭದ್ರತಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಹೊಸ ವ್ಯವಸ್ಥೆಯಿಂದ ಕಾರ್ಯಾಚರಣೆಗಳ ಮೇಲ್ವಿಚಾರಣೆ ಸುಧಾರಿಸಲಿದೆ. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಬೆಳೆಸಲು ಸಾಧ್ಯವಾಗಲಿದ್ದು, ಭದ್ರತಾ ಕಾರ್ಯವಿಧಾನಗಳಲ್ಲಿ ಏಕರೂಪತೆ ಬರಲಿದೆ. ಸಂಬಂಧಿತ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ಸಮನ್ವಯವೂ ಬಲಗೊಳ್ಳಲಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.

ವಿವಿಧ ವಲಯಗಳ ಪುನರ್‌ರಚನೆ

ದೆಹಲಿ ವಲಯವು ಸರ್ಕಾರಿ ಕಟ್ಟಡಗಳು, ವಸ್ತುಸಂಗ್ರಹಾಲಯಗಳು, ಸ್ಮಾರಕಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಭದ್ರತೆಯ ಹೊಣೆ ನಿರ್ವಹಿಸಲಿದೆ. ಇದನ್ನು ಸರ್ಕಾರಿ ಕಟ್ಟಡಗಳು, ವಸ್ತುಸಂಗ್ರಹಾಲಯಗಳು ಮತ್ತು ಸ್ಮಾರಕಗಳು ಹಾಗೂ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ವಲಯವಾಗಿ ಪುನರ್‌ರಚಿಸಲಾಗುತ್ತದೆ.

ವಿದ್ಯುತ್ ವಲಯಕ್ಕೆ ಎರಡು ಪ್ರತ್ಯೇಕ ವಿಭಾಗಗಳನ್ನು ರಚಿಸಲಾಗಿದೆ. ನವದೆಹಲಿಯ ಉತ್ತರ ವಲಯವನ್ನು ವಿದ್ಯುತ್-1 ವಲಯವಾಗಿ ಹಾಗೂ ಕೋಲ್ಕತ್ತಾದ ಈಶಾನ್ಯ ವಲಯ-2 ಅನ್ನು ವಿದ್ಯುತ್-2 ವಲಯವಾಗಿ ಪುನರ್‌ರಚಿಸಲಾಗಿದೆ.

ಕಲ್ಲಿದ್ದಲು ಮತ್ತು ಉಕ್ಕು ಕ್ಷೇತ್ರಗಳಿಗೂ ಪ್ರತ್ಯೇಕ ಭದ್ರತಾ ವಲಯಗಳನ್ನು ರಚಿಸಲಾಗುತ್ತದೆ. ರಾಂಚಿಯ ಪೂರ್ವ ವಲಯವನ್ನು ಕಲ್ಲಿದ್ದಲು ವಲಯವಾಗಿ ಹಾಗೂ ಭಿಲಾಯಿಯ ಕೇಂದ್ರ ವಲಯವನ್ನು ಉಕ್ಕು ವಲಯವಾಗಿ ಪರಿವರ್ತಿಸಲಾಗುತ್ತದೆ.

ಗುವಾಹಟಿಯ ಈಶಾನ್ಯ ವಲಯವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯವಾಗಿ ರೂಪಿಸಲಾಗುತ್ತದೆ. ಮುಂಬೈನ ಪಶ್ಚಿಮ ವಲಯವನ್ನು ಪಶ್ಚಿಮ ಕರಾವಳಿ ಬಂದರು ವಲಯವಾಗಿ ಹಾಗೂ ಚೆನ್ನೈನ ದಕ್ಷಿಣ ವಲಯವನ್ನು ಪೂರ್ವ ಕರಾವಳಿ ಬಂದರು ವಲಯವಾಗಿ ಬದಲಾಯಿಸಲಾಗುತ್ತದೆ.

ಬೆಂಗಳೂರು ವಲಯದಲ್ಲಿ ಯಥಾಸ್ಥಿತಿ

ಬೆಂಗಳೂರಿನಲ್ಲಿರುವ ಅಣುಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ವಲಯವು ಹಿಂದಿನಂತೆಯೇ ಕಾರ್ಯನಿರ್ವಹಿಸಲಿದೆ. ನವದೆಹಲಿಯ ವಿಮಾನ ನಿಲ್ದಾಣ ವಲಯ-1 ಹಾಗೂ ಬೆಂಗಳೂರಿನ ವಿಮಾನ ನಿಲ್ದಾಣ ವಲಯ-2ರ ಪ್ರಸ್ತುತ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ.

ಈ ಹಿಂದೆ ಸಿಐಎಸ್‌ಎಫ್‌ನ ಆಡಳಿತ ಮತ್ತು ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಮುಖ್ಯವಾಗಿ ಭೌಗೋಳಿಕ ಪ್ರದೇಶಗಳ ಆಧಾರದ ಮೇಲೆ ನಿರ್ವಹಿಸಲಾಗುತ್ತಿತ್ತು. ಕಳೆದ 25 ವರ್ಷಗಳಲ್ಲಿ ವಿಮಾನಯಾನ, ಅಣುಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಗೆ ಸಂಬಂಧಿಸಿದ ಕಾರ್ಯತಂತ್ರದ ಮಹತ್ವದ ಸಂಸ್ಥೆಗಳು ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಕಾರ್ಯಾಧಾರಿತ ವ್ಯವಸ್ಥೆಯನ್ನು ಪಡೆ ಅಳವಡಿಸಿಕೊಂಡಿದೆ.

ಹೊಸ ಪುನರ್‌ರಚನೆಯು ಕೈಗಾರಿಕಾ ವಲಯಗಳ ನಿರ್ದಿಷ್ಟ ಭದ್ರತಾ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ನೆರವಾಗಲಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande