
ಬಳ್ಳಾರಿ, 18 ಅಕ್ಟೋಬರ್ (ಹಿ.ಸ.)
ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರವನ್ನು ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಆರ್ಬಿವಿಕೆಎಂ ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಎಚ್. ಹನುಮಂತಪ್ಪ ಮತ್ತು ತಿಮ್ಮಾರೆಡ್ಡಿ ಅವರು, ನಿವೃತ್ತ ಅಧಿಕಾರಿ, ಮಾಜಿ ನಿರ್ದೇಶಕರೊಬ್ಬರ ನಿರ್ದೇಶನದಲ್ಲಿ ಅವ್ಯವಹಾರ ನಡೆದಿದೆ. `ರೈತ ಕಲ್ಯಾಣ ಟ್ರಸ್ಟ್'ನ ಲೆಕ್ಕಾಧಿಕಾರಿ ಶ್ರೀಮತಿ ಕೆ. ಉಮಾಮಹೇಶ್ವರಿ ಅವರನ್ನು ಸೇವೆಯಿಂದ ಅಮಾನತು ಮಾಡಿ, ಹಣವನ್ನು ವಸೂಲಿ ಮಾಡಿದ್ದರೂ ಈ ಅವ್ಯವಹಾರದಲ್ಲಿ ಅನೇಕ ಅಧಿಕಾರಿಗಳು - ಹಾಲಿ ಮತ್ತು ಮಾಜಿ ನಿರ್ದೇಶಕರುಗಳು ಪಾಲ್ಗೊಂಡಿದ್ದಾರೆ. ಕಾರಣ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು, ಹಾಲು ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರವು ಖಂಡನೀಯ. ಭ್ರಷ್ಟಾಚಾರವು ಕ್ಯಾನ್ಸರ್ನಂತೆ ಪಿಡುಗು. ಮನುಷ್ಯರಿಗೆ ಬರುವ ಕ್ಯಾನ್ಸರ್ ಗುಣಮುಖವಾಗಲಿದೆ. ಆದರೆ, ಆಡಳಿತದಲ್ಲಿನ ಭ್ರಷ್ಟಾಚಾರದ ಕ್ಯಾನ್ಸರ್ ಗುಣಮುಖ ಆಗಲಾರದು. ಭ್ರಷ್ಟಾಚಾರ ನಿಯಂತ್ರಣ ಆಗಲೇಬೇಕು ಎಂದರು.
ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷರಾದ ಮುರಹರ ಗೌಡ, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಡಾ. ಎಸ್.ಜೆ.ವಿ. ಮಹಿಪಾಲ್, ಬುಡಾ ಮಾಜಿ ಅಧ್ಯಕ್ಷರಾದ ಪಿ. ಪಾಲಣ್ಣ, ಮಾರುತಿ ಪ್ರಸಾದ್, ಯುವ ಮುಖಂಡರಾದ ಕೆ.ಎಸ್. ದಿವಾಕರ್, ಎಚ್.ಎಂ. ಅಡವಿಸ್ವಾಮಿ, ರವಿ ಸಂಗನಕಲ್ಲು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್