
ಬೆಂಗಳೂರು, 17 ಅಕ್ಟೋಬರ್ (ಹಿ.ಸ.):
ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರೆಯುವಂತೆ ಮಾಡಲು ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನಮ್ಮ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ, ಜನರನ್ನು ಎಂದಿಗೂ ಮರೆಯಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಕಾನೂನು ಶಾಲೆಯ 34ನೇ ಪದವಿ ಪ್ರದಾನ ಸಮಾರಂಭದಲ್ಲಿ ಕಾನೂನು ಪದವೀಧರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಶ್ನಿಸುವುದೇ ಸಶಕ್ತ ಪ್ರಜಾಪ್ರಭುತ್ವದ ಲಕ್ಷಣ
ಸಮರ್ಥ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಸರ್ಕಾರವನ್ನು ಪ್ರಶ್ನಿಸುವ ಅವಕಾಶ ಇರಬೇಕು. ವಿಶ್ವದಾದ್ಯಂತ ಪ್ರಜಾಪ್ರಭುತ್ವ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನವನ್ನು ರಕ್ಷಿಸುವ ವಿಶೇಷ ಜವಾಬ್ದಾರಿ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ ಎಂದು ಹೇಳಿದರು.
ಎಲ್ಲರೂ ಸರ್ಕಾರದೊಂದಿಗೆ ಸಮ್ಮತಿಸುವುದೇ ಸಶಕ್ತ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವುದೇ ನಿಜವಾದ ಪ್ರಜಾಪ್ರಭುತ್ವದ ಲಕ್ಷಣ. ಪದವೀಧರರು ವಿಚಾರಗಳನ್ನು ಪ್ರಶ್ನಿಸಬೇಕು, ಚರ್ಚಿಸಬೇಕು ಮತ್ತು ಸವಾಲುಗಳನ್ನು ಎದುರಿಸಬೇಕು. ಅದೇ ಸಮಯದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಂವಿಧಾನಿಕ ತತ್ವಗಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಆಡಳಿತ, ನೀತಿ ನಿರೂಪಣೆ ಮತ್ತು ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶನ ನೀಡಬೇಕು. ಭಾರತಕ್ಕೆ ಹೆಚ್ಚಿನ ಸಂಖ್ಯೆಯ ವಕೀಲರು ಮಾತ್ರವಲ್ಲ, ಪ್ರಾಮಾಣಿಕತೆ, ಕರುಣೆ ಮತ್ತು ಧೈರ್ಯ ಹೊಂದಿರುವ ವಕೀಲರ ಅಗತ್ಯವಿದೆ. ಸಾಮಾನ್ಯ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು, ಎಷ್ಟೇ ಕಷ್ಟಕರವಾಗಿದ್ದರೂ ನ್ಯಾಯದ ಪರವಾಗಿ ಧ್ವನಿ ಎತ್ತಬೇಕು ಎಂದು ಕಾನೂನು ಪದವೀಧರರಿಗೆ ಕಿವಿಮಾತು ಹೇಳಿದರು.
ನ್ಯಾಯಾಂಗ ಸೇವಾ ಪರೀಕ್ಷೆ ತರಬೇತಿಗೆ ಪ್ರತ್ಯೇಕ ಸಂಸ್ಥೆ
ಕಾನೂನು ಪದವೀಧರರಿಗೆ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡಲು ಹಾಗೂ ಯುವ ವಕೀಲರಿಗೆ ನಿರಂತರ ಶಿಕ್ಷಣ ಒದಗಿಸಲು ಕರ್ನಾಟಕ ಸರ್ಕಾರ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಿದೆ ಎಂದು ಶಿವಕುಮಾರ್ ತಿಳಿಸಿದರು.
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಉದ್ಯಮ ಆರಂಭಿಸುವವರಿಗೆ ಕಾನೂನು ನೆರವು ನೀಡುವ ಸಲುವಾಗಿ ಉದ್ಯಮ ಕಾನೂನು ಸಲಹಾ ಕೇಂದ್ರ ಸ್ಥಾಪನೆಗೂ ಸರ್ಕಾರ ಬೆಂಬಲ ನೀಡಲಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ನೀಡಲಿದ್ದಾರೆ ಎಂದು ಹೇಳಿದರು.
ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಉಳಿಯುತ್ತಿರುವ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ಭಾರತೀಯ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ಬಾಕಿ ಉಳಿದಿದ್ದು, ವ್ಯಕ್ತಿಗಳು ಮತ್ತು ಕುಟುಂಬಗಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ನಮಗೆ ಅದು ಮತ್ತೊಂದು ಪ್ರಕರಣದ ಸಂಖ್ಯೆಯಾಗಿರಬಹುದು. ಆದರೆ, ಸಂಬಂಧಪಟ್ಟ ವ್ಯಕ್ತಿಗೆ ಅದು ಅವರ ಇಡೀ ಜೀವನವೇ ಆಗಿರಬಹುದು. ಹೀಗಾಗಿ ನ್ಯಾಯವನ್ನು ತ್ವರಿತವಾಗಿ, ಸರಳವಾಗಿ, ಕೈಗೆಟುಕುವ ದರದಲ್ಲಿ ಮತ್ತು ಎಲ್ಲರಿಗೂ ದೊರೆಯುವಂತೆ ಮಾಡುವುದು ಅಗತ್ಯ ಎಂದರು.
ಜನರ ಘನತೆ, ಸ್ವಾತಂತ್ರ್ಯ, ಸಮಾನತೆಯೇ ಅಭಿವೃದ್ಧಿಯ ಮಾನದಂಡ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಆದರೆ, ಅಭಿವೃದ್ಧಿಯನ್ನು ಕೇವಲ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಅಳೆಯಬಾರದು. ಬದಲಾಗಿ ಪ್ರಜೆಗಳ ಘನತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭದ್ರತೆಯ ಆಧಾರದ ಮೇಲೆ ಅಳೆಯಬೇಕು ಎಂದು ಹೇಳಿದರು.
ಕಾನೂನು ಪದವೀಧರರು ತರಗತಿಗಳ ಆಚೆಗೂ ಗಮನಹರಿಸಿ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಸಾಮಾನ್ಯ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಣದ ನೈಜ ಉದ್ದೇಶ ಸ್ವಂತ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರರ ಜೀವನವನ್ನು ಉತ್ತಮಗೊಳಿಸುವುದೂ ಅದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಮುಂದಿನ ಐದು ದಶಕಗಳಲ್ಲಿ ಭಾರತದ ಭವಿಷ್ಯ ರೂಪಿಸುವಲ್ಲಿ ಯುವಜನರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾಕಾರರು ಪ್ರತಿಪಾದಿಸಿದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಯ ಮೌಲ್ಯಗಳು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯಗಳಾಗಿವೆ ಎಂದರು.
ಭಾರತದ ಹಿರಿಮೆಯನ್ನು ನಾವು ಎಷ್ಟು ಬೆಳೆಯುತ್ತೇವೆ ಎಂಬುದರಿಂದ ಮಾತ್ರವಲ್ಲ, ಎಷ್ಟು ನ್ಯಾಯಯುತವಾಗಿ ಬೆಳೆಯುತ್ತೇವೆ ಎಂಬುದರಿಂದಲೂ ಅಳೆಯಬೇಕು. ಪದವೀಧರರು ತಮ್ಮ ಯಶಸ್ಸನ್ನು ತಾವು ಸುಧಾರಿಸಿದ ಜನರ ಜೀವನ ಮತ್ತು ರಕ್ಷಿಸಿದ ಹಕ್ಕುಗಳ ಆಧಾರದ ಮೇಲೆ ಅಳೆಯಬೇಕು ಎಂದು ಸಲಹೆ ನೀಡಿದರು.
ವಕೀಲನಾಗುವ ಆಸೆ ಹೊಂದಿದ್ದೆ
ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸಿದ ಶಿವಕುಮಾರ್, ತಾವು ಕೂಡ ಒಮ್ಮೆ ವಕೀಲರಾಗಬೇಕೆಂದು ಬಯಸಿದ್ದೆ. ಆದರೆ, ವಿದ್ಯಾರ್ಥಿಯಾಗಿದ್ದಾಗಲೇ ಪಕ್ಷದ ಟಿಕೆಟ್ ದೊರೆತ ಕಾರಣ ರಾಜಕೀಯವು ತಮ್ಮನ್ನು ಸಾರ್ವಜನಿಕ ಜೀವನಕ್ಕೆ ಕರೆತಂದಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ಕುಲಾಧಿಪತಿ ನ್ಯಾಯಮೂರ್ತಿ ಸೂರ್ಯ ಕಾಂತ್, ಮುಖ್ಯ ಅತಿಥಿ ಅರುಂಧತಿ ನಾಗ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಡಾ. ಸುಧೀರ್ ಕೃಷ್ಣಸ್ವಾಮಿ, ಅಧ್ಯಾಪಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.