
ಹುಬ್ಬಳ್ಳಿ, 17 ಅಕ್ಟೋಬರ್ (ಹಿ.ಸ.):
ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎರಡು ದಿನಗಳಲ್ಲೇ ಜಂಟಿ ಸಮಿತಿ ರಚಿಸಿದ್ದು, ನಾಲ್ಕೈದು ದಿನಗಳಲ್ಲಿ ಅಧ್ಯಯನ ಆರಂಭಿಸಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಕುರಿತು, ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಹೋರಾಟದಿಂದ ಹಿಂದೆ ಸರಿದು ಸಮಿತಿಯ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರೈತ ನಾಯಕರು ಮತ್ತೆ ಚರ್ಚೆಗೆ ಬಂದರೂ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ರೈತ ಪ್ರಮುಖರು ಐದಾರು ಮಂದಿ ಬಂದರೆ ಗೊಂದಲವಿಲ್ಲದೆ ಸುಗಮವಾಗಿ ಚರ್ಚೆ ನಡೆಸಬಹುದು ಎಂದು ಹೇಳಿದರು.
ರೈತರ ಹೋರಾಟದ ಸಂದರ್ಭದಲ್ಲಿ ಕೆಲವರು ಸಿಟ್ಟಿನಲ್ಲಿ ಮಾತನಾಡಿರಬಹುದು. ಸಾರ್ವಜನಿಕ ಜೀವನದಲ್ಲಿ ಇಂತಹ ಘಟನೆಗಳು ಸಹಜವಾಗಿದ್ದು, ಅವುಗಳಿಗೆ ಬೇಸರಿಸಿಕೊಳ್ಳುವುದಿಲ್ಲ. ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರು ಮತ್ತು ದುರ್ಬಲ ವರ್ಗದವರ ಪರವಾಗಿದೆ. ರೈತರು ದೇಶದ ಆರ್ಥಿಕತೆಯ ಮೂಲವಾಗಿದ್ದು, ಅವರ ಹಿತಾಸಕ್ತಿಗೆ ಧಕ್ಕೆ ಬರಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ನೇಮಿಸಿರುವ ಪ್ರೊ. ರಮೇಶ್ ಚಂದ್ ನೇತೃತ್ವದ ಸಮಿತಿಯು ಕಬ್ಬು ಬೆಳೆಗಾರರ ಸಮಸ್ಯೆಗಳು, ಬೇಡಿಕೆಗಳು ಹಾಗೂ ನ್ಯಾಯಯುತ ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಲಿದೆ ಎಂದರು.
ಸ್ವಾಮಿನಾಥನ್ ವರದಿ ಜಾರಿಗೊಳಿಸಿದ್ದೇ ಮೋದಿ ಸರ್ಕಾರ
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕನಿಷ್ಠ ಬೆಂಬಲ ಬೆಲೆ ಮತ್ತು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಪ್ರಮಾಣ ಹೆಚ್ಚಾಗಿದೆ. ರೈತರು ಬೆಳೆದಷ್ಟು ಭತ್ತ ಮತ್ತು ಗೋಧಿಯನ್ನು ಖರೀದಿಸಲಾಗುತ್ತಿದೆ. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿದ್ದು ಮೋದಿ ಸರ್ಕಾರವೇ ಎಂದು ಸ್ವತಃ ಸ್ವಾಮಿನಾಥನ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ರಾಜ್ಯ ಸರ್ಕಾರ ಇಂದೇ ಎಸ್ಎಪಿ ಘೋಷಿಸಲಿ
ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದೇ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ 2025ರಲ್ಲಿಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈ ಬಾರಿಯೂ ಎಸ್ಎಪಿ ಜಾರಿಗೆ ತರುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಇತ್ತೀಚೆಗೆ ಅವರು ದೆಹಲಿಗೆ ಬಂದಿದ್ದಾಗಲೂ ಈ ಬಗ್ಗೆ ಒತ್ತಾಯಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಸಕ್ಕರೆ ಇಳುವರಿ ಲೆಕ್ಕಾಚಾರ ಮತ್ತು ತೂಕದ ವಂಚನೆ ತಡೆಯಲು ಕ್ರಮ ಕೈಗೊಳ್ಳುವಂತೆ ಸೌಹಾರ್ದಯುತವಾಗಿ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ದೇಶದ 10ರಿಂದ 11 ರಾಜ್ಯಗಳಲ್ಲಿ ಸಕ್ಕರೆ ಉತ್ಪಾದನೆಯಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳೊಂದಿಗೂ ಚರ್ಚಿಸಬೇಕಾಗುತ್ತದೆ. ಆದಾಗ್ಯೂ, ಕರ್ನಾಟಕದ ರೈತರೊಂದಿಗೆ ಸಮಾಲೋಚನೆ ನಡೆಸಿ ಎರಡು ದಿನಗಳಲ್ಲೇ ಜಂಟಿ ಸಮಿತಿ ರಚಿಸಲಾಗಿದೆ. ಕೃಷಿ ಕ್ಷೇತ್ರದ ಪರಿಣತರು ಹಾಗೂ ವಿಷಯಜ್ಞಾನ ಹೊಂದಿರುವ ತಜ್ಞರನ್ನು ಸಮಿತಿಗೆ ನೇಮಿಸಲಾಗಿದ್ದು, ಶೀಘ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ರೈತರು ಹೋರಾಟ ಬಿಟ್ಟು ಸಮಿತಿಯ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರೈತರು, ಕಾರ್ಖಾನೆಗಳು, ಗ್ರಾಹಕರ ಹಿತ ಕಾಪಾಡುವುದು ಗುರಿ
ಮಹಾರಾಷ್ಟ್ರದಲ್ಲಿ ಈಗಾಗಲೇ 60 ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭಿಸಿವೆ. ಮಹಾರಾಷ್ಟ್ರ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಇಂತಹ ಪ್ರತಿಭಟನೆಗಳು ನಡೆಯುತ್ತಿಲ್ಲ; ಕರ್ನಾಟಕದಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿದೆ. ಆದರೂ ಕೇಂದ್ರ ಸರ್ಕಾರ ಸಹಾನುಭೂತಿಯಿಂದ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಂದಾಗಿದೆ ಎಂದು ಹೇಳಿದರು.
ರೈತರಿಗೆ ಕಬ್ಬಿನ ಬೆಲೆ ಕಡಿಮೆಯಾಗಬಾರದು, ಗ್ರಾಹಕರಿಗೆ ಸಕ್ಕರೆ ಬೆಲೆ ಹೊರೆಯಾಗಬಾರದು ಹಾಗೂ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಈ ಉದ್ದೇಶದಿಂದ ಸಕ್ಕರೆ ವಲಯದ ಎಥೆನಾಲ್ ಖರೀದಿಯನ್ನೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಎಥೆನಾಲ್ ಖರೀದಿಯನ್ನು ಹೆಚ್ಚಿಸಿದ್ದು, ಕರ್ನಾಟಕದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಿದೆ. ಈ ಮೂರು ರಾಜ್ಯಗಳಿಂದಲೇ ಸಂಪೂರ್ಣ ಬೇಡಿಕೆಯನ್ನು ಪೂರೈಸುವುದು ಸಾಧ್ಯವಿಲ್ಲದಿದ್ದರೂ, ಕರ್ನಾಟಕದಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಖರೀದಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ನೀತಿಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ₹31ಕ್ಕಿಂತ ಕೆಳಕ್ಕೆ ಇಳಿಯದಂತೆ ನೋಡಿಕೊಳ್ಳಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಈ ಬೆಲೆ ಕಾಯ್ದುಕೊಳ್ಳಲಾಗಿದ್ದು, ಇತ್ತೀಚೆಗೆ ಸಕ್ಕರೆ ₹50ಕ್ಕೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ₹60 ದಾಟಿದೆ ಎಂದು ವಿವರಿಸಿದರು.
ಕಬ್ಬು ಬೆಳೆಗಾರರು ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಕನಿಷ್ಠ ಬೆಂಬಲ ಬೆಲೆ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದ್ದಾಗಿದ್ದು, ಅವುಗಳ ಬಲವರ್ಧನೆ ಮತ್ತು ನಷ್ಟ ತಡೆಗೆ ಸಹಕಾರಿಯಾಗಿದೆ. ರೈತರು, ಕಾರ್ಖಾನೆಗಳು ಮತ್ತು ಗ್ರಾಹಕರ ಹಿತವನ್ನು ಪರಿಗಣಿಸಿಯೇ ಸಕ್ಕರೆ ಬೆಲೆ ನಿಗದಿಪಡಿಸಬೇಕಾಗುತ್ತದೆ. ಎಲ್ಲರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಟೀಕೆ-ಟಿಪ್ಪಣಿಗಳು ಸಹಜ. ಸಾರ್ವಜನಿಕ ಜೀವನದಲ್ಲಿ ಯಾರ ಮೇಲೂ ದ್ವೇಷ ಇಟ್ಟುಕೊಂಡಿಲ್ಲ. ರೈತರ ಹೋರಾಟದ ಸಂದರ್ಭದಲ್ಲಿಯೂ ಕೆಲವರು ಟೀಕಿಸಿರಬಹುದು. ಅದನ್ನು ಲೆಕ್ಕಿಸದೆ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧವಿರುವುದಾಗಿ ಪ್ರಲ್ಹಾದ ಜೋಶಿ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.