ಜನಗಣತಿ ಗಣತಿದಾರರ ಅರ್ಹತೆ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ಷೇಪ
ನವದೆಹಲಿ, 17 ಅಕ್ಟೋಬರ್ (ಹಿ.ಸ.): ಜನಗಣತಿ-2027ರ ಗಣತಿದಾರರ ನೇಮಕಾತಿಗೆ ನಿಗದಿಪಡಿಸಿರುವ ಅರ್ಹತಾ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಬದಲಾವಣೆಯ ಮೂಲಕ ಒಂದೇ ಸಿದ್ಧಾಂತವನ್ನು ಅನುಸರಿಸುವ ಸಾವಿರಾರು ಕಾರ್ಯಕರ್ತರಿಗೆ ಉದ್ಯೋಗ ಕಲ್ಪಿಸಲು ಸರ್
कांग्रेस महासचिव (संचार) जयराम रमेश (फाइल फोटो)।


ನವದೆಹಲಿ, 17 ಅಕ್ಟೋಬರ್ (ಹಿ.ಸ.):

ಜನಗಣತಿ-2027ರ ಗಣತಿದಾರರ ನೇಮಕಾತಿಗೆ ನಿಗದಿಪಡಿಸಿರುವ ಅರ್ಹತಾ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಬದಲಾವಣೆಯ ಮೂಲಕ ಒಂದೇ ಸಿದ್ಧಾಂತವನ್ನು ಅನುಸರಿಸುವ ಸಾವಿರಾರು ಕಾರ್ಯಕರ್ತರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಇದರಿಂದ ಜನಗಣತಿಯ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳು ಉದ್ಭವಿಸಬಹುದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿರುವ ಜೈರಾಮ್ ರಮೇಶ್, ರಾಷ್ಟ್ರೀಯ ಸ್ವಯಂಸೇವಕ ಸಂಘವು ಜುಲೈ 10ರಿಂದ 12ರವರೆಗೆ ಕರ್ನಾಟಕದ ಬೆಳಗಾವಿಯಲ್ಲಿ ತನ್ನ ಕಾರ್ಯಕರ್ತರಿಗಾಗಿ ತರಬೇತಿ ಶಿಬಿರ ಆಯೋಜಿಸಿತ್ತು ಎಂದು ತಿಳಿಸಿದ್ದಾರೆ. ಈ ಶಿಬಿರದಲ್ಲಿ ಜನಗಣತಿಗೆ ಸಂಬಂಧಿಸಿದ ತರಬೇತಿಯನ್ನೂ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಕ್ಟೋಬರ್ 14ರಂದು ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಗೃಹ ಸಚಿವಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸಾರ್ವಜನಿಕರು ಹಾಗೂ ಭಾರತೀಯ ಮತ್ತು ವಿದೇಶಿ ಸಂಸ್ಥೆಗಳಿಂದ ಸಲಹೆಗಳನ್ನು ಆಹ್ವಾನಿಸಿರುವುದನ್ನೂ ಅವರು ಪ್ರಸ್ತಾಪಿಸಿದ್ದಾರೆ. ಈ ಬೆಳವಣಿಗೆಗಳನ್ನು ಗಣತಿದಾರರ ನೇಮಕಾತಿ ಅರ್ಹತೆಯನ್ನು ವಿಸ್ತರಿಸಿರುವ ನಿರ್ಧಾರದೊಂದಿಗೆ ಸೇರಿಸಿ ನೋಡಬೇಕಿದೆ ಎಂದು ಹೇಳಿದ್ದಾರೆ.

ನೇಮಕಾತಿ ಅರ್ಹತಾ ನಿಯಮಗಳಲ್ಲಿ ಬದಲಾವಣೆ

ಕೇಂದ್ರ ಸರ್ಕಾರವು ಅಕ್ಟೋಬರ್ 16ರಂದು ಜನಗಣತಿ ನಿಯಮಗಳು-1990ಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. ಇದರನ್ವಯ ಗಣತಿದಾರರಾಗಿ ನೇಮಕಗೊಳ್ಳಲು ಅರ್ಹರಾಗಿರುವ ವ್ಯಕ್ತಿಗಳ ವರ್ಗವನ್ನು ವಿಸ್ತರಿಸಲಾಗಿದೆ.

ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಜತೆಗೆ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನೂ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸಂಘಗಳು ಮತ್ತು ಟ್ರಸ್ಟ್‌ಗಳ ಶಿಕ್ಷಕರೂ ಈ ಕಾರ್ಯಕ್ಕೆ ಅರ್ಹರಾಗಿರುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು, ಶಾಸನಬದ್ಧ ಸಂಸ್ಥೆಗಳು, ಬ್ಯಾಂಕುಗಳು, ಕಂಪನಿಗಳು, ಇತರ ಸಂಸ್ಥೆಗಳು, ಸಂಘಗಳು ಹಾಗೂ ಟ್ರಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಗುಮಾಸ್ತರು ಮತ್ತು ಇತರ ಅಧಿಕಾರಿಗಳನ್ನೂ ಅರ್ಹರ ಪಟ್ಟಿಗೆ ಸೇರಿಸಲಾಗಿದೆ. ಜನಗಣತಿ ಕಾರ್ಯಕ್ಕಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಇತರ ಸೂಕ್ತ ವ್ಯಕ್ತಿಗಳನ್ನೂ ನೇಮಿಸಿಕೊಳ್ಳಬಹುದು.

ಉನ್ನತ ಮಟ್ಟದ ಸಮಿತಿಯ ಬಗ್ಗೆಯೂ ಪ್ರಶ್ನೆ

ಕೇಂದ್ರ ಗೃಹ ಸಚಿವಾಲಯವು 2026ರ ಮೇ 26ರಂದು ರಚಿಸಿರುವ ಉನ್ನತ ಮಟ್ಟದ ಜನಸಂಖ್ಯಾ ಬದಲಾವಣೆಗಳ ಸಮಿತಿಯ ಬಗ್ಗೆಯೂ ಜೈರಾಮ್ ರಮೇಶ್ ಪ್ರಶ್ನೆಗಳನ್ನು ಎತ್ತಿದ್ದಾರೆ. ದೇಶದಲ್ಲಿನ ಜನಸಂಖ್ಯಾ ಬದಲಾವಣೆಗಳು, ಅವುಗಳಿಗೆ ಕಾರಣಗಳು ಹಾಗೂ ಅವುಗಳಿಗೆ ಸಂಬಂಧಿಸಿದ ನೀತಿ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಅಧ್ಯಯನ ಮಾಡುವುದು ಸಮಿತಿಯ ಜವಾಬ್ದಾರಿಯಾಗಿದೆ.

ಅಕ್ಟೋಬರ್ 14ರಂದು ಸಮಿತಿಯು ಜನಸಂಖ್ಯಾ ಬದಲಾವಣೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಲಹೆಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿದೆ. ಈ ಉದ್ದೇಶಕ್ಕಾಗಿ ಸರ್ಕಾರಿ ಇಲಾಖೆಗಳು, ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಕೋರಲಾಗಿದೆ.

ಗಣತಿದಾರರ ನೇಮಕಾತಿ ಅರ್ಹತೆಯಲ್ಲಿನ ಬದಲಾವಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಗೆ ಸಂಬಂಧಿಸಿದವರಿಗೆ ಅನುಕೂಲ ಕಲ್ಪಿಸಲು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎದುರಿಸುತ್ತಿರುವ ಜನಗಣತಿ ಪ್ರಕ್ರಿಯೆಯ ಮೇಲೆ ಈ ನಿರ್ಧಾರ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಲಿದೆ. ಜನಗಣತಿಯಂತಹ ಮಹತ್ವದ ಪ್ರಕ್ರಿಯೆಯನ್ನು ರಾಜಕೀಯವಾಗಿ ಪ್ರಭಾವಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande