
ಬೆಂಗಳೂರು, 16 ಅಕ್ಟೋಬರ್ (ಹಿ.ಸ.):
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿವೃತ್ತ ಅಬಕಾರಿ ಅಧಿಕಾರಿ ಎಂ. ರಾಮಚಂದ್ರ ಮತ್ತು ಅವರ ಮಗಳು ಆರ್. ಯುವರೇಖಾ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎಂ. ರಾಮಚಂದ್ರ ಅವರಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹5 ಲಕ್ಷ ದಂಡ ವಿಧಿಸಿದೆ. ಅವರ ಮಗಳು ಆರ್. ಯುವರೇಖಾ ಅವರಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತವೆ. ಇಂತಹ ಅಪರಾಧಗಳು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ವೈಟ್ ಕಾಲರ್ ಅಪರಾಧಗಳಾಗಿವೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಆಸ್ತಿಗಳ ಮುಟ್ಟುಗೋಲಿಗೆ ಆದೇಶ
ಅಕ್ರಮವಾಗಿ ಗಳಿಸಿದ ಹಣದಿಂದ ಖರೀದಿಸಲಾಗಿದೆ ಎನ್ನಲಾದ ಸ್ಥಿರಾಸ್ತಿಗಳನ್ನು ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 8(5)ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
ಮುಟ್ಟುಗೋಲಿಗೆ ಒಳಪಡಿಸಲಾದ ಆಸ್ತಿಗಳಲ್ಲಿ ಬೆಂಗಳೂರಿನ ವಿಜಯನಗರದಲ್ಲಿರುವ 30×51 ಅಡಿ ಅಳತೆಯ ನಿವೇಶನದಲ್ಲಿನ ಮನೆ ಹಾಗೂ ಅದರ ಹಿಂಭಾಗದಲ್ಲಿ ನಿರ್ಮಿಸಿರುವ ಮೂರು ಮಹಡಿಯ ಕಟ್ಟಡದಲ್ಲಿನ 1 ಬಿಎಚ್ಕೆ ಮನೆಗಳು ಸೇರಿವೆ. ಅಲ್ಲದೆ, ಕೆಂಗೇರಿಯ ಹಳೇಗೆರೆಹಳ್ಳಿಯಲ್ಲಿರುವ ಎರಡು ವಸತಿ ನಿವೇಶನಗಳು ಮತ್ತು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕುಟ್ಟವಾಡಿ ಗ್ರಾಮದಲ್ಲಿರುವ 12 ಗುಂಟೆ ಕೃಷಿ ಜಮೀನನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ.
2009ರಲ್ಲಿ ದಾಖಲಾಗಿದ್ದ ಪ್ರಕರಣ
1977ರಿಂದ 2009ರವರೆಗಿನ ಪರಿಶೀಲನಾ ಅವಧಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು 2009ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಬಳಿಕ 2012ರಲ್ಲಿ ಸುಮಾರು ₹1.79 ಕೋಟಿ ಮೌಲ್ಯದ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿದ್ದರು.
ಬೆಂಗಳೂರಿನ ಸಿಟಿ ಮಾರ್ಕೆಟ್ ವಲಯದಲ್ಲಿ ಪ್ರಭಾರ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ರಾಮಚಂದ್ರ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯಕ್ಕೂ ಮೀರಿದ ಆಸ್ತಿ ಸಂಪಾದಿಸಿದ್ದರು ಹಾಗೂ ಮಗಳ ಹೆಸರಿನಲ್ಲಿಯೂ ಆಸ್ತಿಗಳನ್ನು ಖರೀದಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ಹಾಗೂ 47ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ್ ಜೆ. ಬಾಲಿ ಅವರು ಪ್ರಕರಣದ ಕುರಿತು ಈ ತೀರ್ಪು ಪ್ರಕಟಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R