
ಬೆಂಗಳೂರು, 16 ಅಕ್ಟೋಬರ್ (ಹಿ.ಸ.):
ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಕನ್ನಡದಲ್ಲಿ ಮಾತನಾಡುವ ಮೂಲಕ ಬೆಂಗಳೂರಿನ ಅಭಿಮಾನಿಗಳ ಮನಗೆದ್ದಿದ್ದಾರೆ.
‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಅಂತಾರಾಷ್ಟ್ರೀಯ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡಿಗರ ಪ್ರೀತಿ, ಅಭಿಮಾನ ಹಾಗೂ ಆಶೀರ್ವಾದಕ್ಕೆ ಧನ್ಯವಾದ ತಿಳಿಸಿದ ಅವರು, ಸಹನಟ ರಾಕಿಂಗ್ ಸ್ಟಾರ್ ಯಶ್ ಅವರನ್ನೂ ಮೆಚ್ಚಿಕೊಂಡಿದ್ದಾರೆ.
ಅ.15ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್’ ಎಂದು ಮಾತು ಆರಂಭಿಸಿದ ರಣಬೀರ್, ‘ನಮಸ್ಕಾರ ಬೆಂಗಳೂರು’ ಎಂದು ಕನ್ನಡದಲ್ಲೇ ಪ್ರೇಕ್ಷಕರನ್ನು ಸ್ವಾಗತಿಸಿದರು. ಬಳಿಕ, “ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ತುಂಬಾ ಧನ್ಯವಾದಗಳು” ಎಂದು ಹೇಳಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿರುವ ಯಶ್ ಅವರ ಬಗ್ಗೆ ಪ್ರಸ್ತಾಪಿಸಿದ ರಣಬೀರ್, “ಈ ಬಾರಿ ಇಷ್ಟನ್ನೇ ಕಲಿತು ಬಂದಿದ್ದೇನೆ. ಮುಂದಿನ ಬಾರಿ ಯಶ್ ಬಾಸ್ ಅವರಿಂದ ಇನ್ನೂ ಸ್ವಲ್ಪ ಹೆಚ್ಚು ಕನ್ನಡ ಕಲಿತು ಬರುತ್ತೇನೆ” ಎಂದು ಹಾಸ್ಯಭರಿತವಾಗಿ ಹೇಳಿದರು. ಅವರ ಈ ಮಾತುಗಳಿಗೆ ಸಭಿಕರಿಂದ ಚಪ್ಪಾಳೆ ಹಾಗೂ ಹರ್ಷೋದ್ಗಾರ ವ್ಯಕ್ತವಾಯಿತು.
ಯಶ್ ಜತೆ ತೆರೆ ಹಂಚಿಕೊಳ್ಳಲು ಸಂತಸ
ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಈ ಪೌರಾಣಿಕ ಚಿತ್ರದಲ್ಲಿ ನಟಿಸುವ ಅವಕಾಶದ ಬಗ್ಗೆ ರಣಬೀರ್ ಸಂತಸ ವ್ಯಕ್ತಪಡಿಸಿದ್ದಾರೆ. ಯಶ್ ಅವರಂತಹ ಪ್ರಭಾವಿ ನಟನೊಂದಿಗೆ ತೆರೆ ಹಂಚಿಕೊಳ್ಳುವುದು ರೋಚಕ ಅನುಭವ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಪುರಾಣ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶ ಹೊಂದಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗವು 2026ರ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಎರಡನೇ ಭಾಗವು 2027ರ ದೀಪಾವಳಿ ಸಂದರ್ಭದಲ್ಲಿ ತೆರೆಕಾಣುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R