
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)
ರಾಜ್ಯಾದ್ಯಂತ ಮುಂಗಾರು ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ತಿಳಿಸಿದ್ದಾರೆ.
ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಗೆ ಸಿದ್ಧತೆ
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನ ತೀವ್ರ ಕೊರತೆ ಎದುರಿಸಬಹುದಾದ ಸೂಕ್ಷ್ಮ ಗ್ರಾಮಗಳು ಮತ್ತು ವಾರ್ಡ್ಗಳನ್ನು ಗುರುತಿಸಲಾಗಿದೆ. ಅಗತ್ಯವಿರುವ ಪ್ರದೇಶಗಳಿಗೆ ಟ್ಯಾಂಕರ್ಗಳ ಮೂಲಕ ಪ್ರತಿದಿನ ಶುದ್ಧ ಕುಡಿಯುವ ನೀರು ಪೂರೈಸಲು ಸೂಚಿಸಲಾಗಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ದುರಸ್ತಿಗೆ ಒಳಗಾಗಿರುವ ಕೊಳವೆಬಾವಿಗಳನ್ನು ತುರ್ತಾಗಿ ಸರಿಪಡಿಸುವಂತೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೀರಿನ ಸಮಸ್ಯೆ ಪರಿಹಾರ ಕಾರ್ಯಗಳಲ್ಲಿ ನಿರ್ಲಕ್ಷ್ಯ ಅಥವಾ ವಿಳಂಬ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿರಂತರ ನಿಗಾ ವಹಿಸಿ, ಸಾರ್ವಜನಿಕರಿಂದ ದೂರು ಬಂದ ತಕ್ಷಣ ಸ್ಪಂದಿಸುವಂತೆ ಸೂಚಿಸಲಾಗಿದೆ.
64 ಕೆರೆಗಳ ಪೈಕಿ 20ರಲ್ಲಿ ಶೇ. 40ಕ್ಕಿಂತ ಕಡಿಮೆ ನೀರು
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 64 ಗ್ರಾಮೀಣ ಕುಡಿಯುವ ನೀರಿನ ಸಂಗ್ರಹ ಕೆರೆಗಳಿವೆ. ಇವುಗಳ ಪೈಕಿ 20 ಕೆರೆಗಳಲ್ಲಿ ಶೇ. 0ರಿಂದ 40ರಷ್ಟು, 13 ಕೆರೆಗಳಲ್ಲಿ ಶೇ. 41ರಿಂದ 70ರಷ್ಟು ಹಾಗೂ 23 ಕೆರೆಗಳಲ್ಲಿ ಶೇ. 71ರಿಂದ 100ರಷ್ಟು ನೀರು ಸಂಗ್ರಹವಾಗಿದೆ. ಉಳಿದ ಎಂಟು ಘಟಕಗಳಲ್ಲಿ ನದಿಯಿಂದ ಅಥವಾ ನೇರವಾಗಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಯುವವರೆಗೆ ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ತಾಲೂಕುವಾರು ಕೆರೆಗಳ ಸ್ಥಿತಿಗತಿ
ಬಳ್ಳಾರಿ ತಾಲೂಕಿನಲ್ಲಿ ಒಟ್ಟು 14 ಕೆರೆಗಳಿದ್ದು, ಏಳು ಕೆರೆಗಳಲ್ಲಿ ಶೇ. 0ರಿಂದ 40ರಷ್ಟು ನೀರಿದೆ. ಉಳಿದ ಏಳು ಕೆರೆಗಳಲ್ಲಿ ಶೇ. 71ರಿಂದ 100ರಷ್ಟು ನೀರು ಸಂಗ್ರಹವಾಗಿದೆ. ಶೇ. 41ರಿಂದ 70ರಷ್ಟು ನೀರಿರುವ ಕೆರೆಗಳಿಲ್ಲ. ಯಾವುದೇ ಕೆರೆಗೆ ನದಿಯಿಂದ ನೇರವಾಗಿ ನೀರು ಪಂಪ್ ಮಾಡಲಾಗುತ್ತಿಲ್ಲ.
ಕುರುಗೋಡು ತಾಲೂಕಿನಲ್ಲಿ ಒಟ್ಟು 10 ಕೆರೆಗಳಿದ್ದು, ಐದರಲ್ಲಿ ಶೇ. 0ರಿಂದ 40ರಷ್ಟು ಹಾಗೂ ಉಳಿದ ಐದರಲ್ಲಿ ಶೇ. 71ರಿಂದ 100ರಷ್ಟು ನೀರು ಸಂಗ್ರಹವಾಗಿದೆ. ಇಲ್ಲಿಯೂ ನದಿಯಿಂದ ನೇರವಾಗಿ ನೀರು ಪಂಪ್ ಮಾಡುವ ಅಗತ್ಯ ದಾಖಲಾಗಿಲ್ಲ.
ಸಿರುಗುಪ್ಪ ತಾಲೂಕಿನಲ್ಲಿ ಐದು ಕೆರೆಗಳಿದ್ದು, ಮೂರು ಕಡೆಗಳಲ್ಲಿ ನದಿಯಿಂದ ನೇರವಾಗಿ ನೀರು ಪಂಪ್ ಮಾಡಿ ಪೂರೈಸಲಾಗುತ್ತಿದೆ. ಒಂದು ಕೆರೆಯಲ್ಲಿ ಶೇ. 0ರಿಂದ 40ರಷ್ಟು ಹಾಗೂ ಮತ್ತೊಂದು ಕೆರೆಯಲ್ಲಿ ಶೇ. 41ರಿಂದ 70ರಷ್ಟು ನೀರಿದೆ. ಶೇ. 71ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿರುವ ಕೆರೆ ಇಲ್ಲಿಲ್ಲ.
ಸಂಡೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 35 ಕೆರೆಗಳಿವೆ. ಇವುಗಳ ಪೈಕಿ ಏಳು ಕೆರೆಗಳಲ್ಲಿ ಶೇ. 0ರಿಂದ 40ರಷ್ಟು, 12 ಕೆರೆಗಳಲ್ಲಿ ಶೇ. 41ರಿಂದ 70ರಷ್ಟು ಹಾಗೂ 11 ಕೆರೆಗಳಲ್ಲಿ ಶೇ. 71ರಿಂದ 100ರಷ್ಟು ನೀರಿದೆ. ಐದು ಕಡೆಗಳಲ್ಲಿ ನದಿಯಿಂದ ನೇರವಾಗಿ ನೀರು ಪಂಪ್ ಮಾಡಲಾಗುತ್ತಿದೆ.
ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಶೇ. 88ರಷ್ಟು ಪ್ರಗತಿ
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ತಡೆಗಟ್ಟಲು ಡಿಸೆಂಬರ್ವರೆಗೆ ಅನುಷ್ಠಾನಗೊಳಿಸಲಾಗುತ್ತಿರುವ ತುರ್ತು ನಿರ್ವಹಣಾ ಯೋಜನೆಯಡಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 116 ಕಾಮಗಾರಿಗಳಿಗೆ ಒಟ್ಟು 150 ಲಕ್ಷ ರೂ. ಮೊತ್ತದ ತುರ್ತು ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ದೊರೆತಿದೆ. ಪ್ರಸ್ತುತ ವರದಿಯ ಪ್ರಕಾರ, ವಿವಿಧ ತಾಲೂಕುಗಳಲ್ಲಿ 140.17 ಲಕ್ಷ ರೂ. ವೆಚ್ಚದ 84 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 74 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ 10 ಕಾಮಗಾರಿಗಳು ಪ್ರಗತಿಯಲ್ಲಿವೆ.
ತಾಲೂಕುವಾರು ಪ್ರಗತಿಯಂತೆ, ಬಳ್ಳಾರಿಯಲ್ಲಿ 41.45 ಲಕ್ಷ ರೂ. ವೆಚ್ಚದ 10 ಕಾಮಗಾರಿಗಳ ಪೈಕಿ ಒಂಬತ್ತು ಪೂರ್ಣಗೊಂಡಿದ್ದು, ಒಂದು ಬಾಕಿಯಿದೆ. ಕಂಪ್ಲಿಯಲ್ಲಿ 15 ಲಕ್ಷ ರೂ. ವೆಚ್ಚದ 22 ಕಾಮಗಾರಿಗಳಲ್ಲಿ 17 ಪೂರ್ಣಗೊಂಡಿದ್ದು, ಐದು ಬಾಕಿಯಿವೆ. ಕುರುಗೋಡಿನಲ್ಲಿ 13.31 ಲಕ್ಷ ರೂ. ವೆಚ್ಚದ 20 ಕಾಮಗಾರಿಗಳಲ್ಲಿ 17 ಪೂರ್ಣಗೊಂಡಿದ್ದು, ಮೂರು ಬಾಕಿಯಿವೆ.
ಸಿರುಗುಪ್ಪದಲ್ಲಿ 37.40 ಲಕ್ಷ ರೂ. ವೆಚ್ಚದ 20 ಕಾಮಗಾರಿಗಳ ಪೈಕಿ 19 ಪೂರ್ಣಗೊಂಡಿದ್ದು, ಒಂದು ಬಾಕಿಯಿದೆ. ಸಂಡೂರಿನಲ್ಲಿ 33.01 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ಎಲ್ಲ 12 ಕಾಮಗಾರಿಗಳೂ ಪೂರ್ಣಗೊಂಡಿವೆ. ಬಾಕಿ ಉಳಿದಿರುವ 10 ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ನಗರ ಪ್ರದೇಶಗಳಲ್ಲಿನ ನೀರಿನ ಸಂಗ್ರಹದ ವಿವರ
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 39 ವಾರ್ಡ್ಗಳಿದ್ದು, ತುಂಗಭದ್ರಾ ಎಚ್ಎಲ್ಸಿ ಮತ್ತು ಎಲ್ಎಲ್ಸಿ ನೀರಿನ ಪ್ರಮುಖ ಮೂಲಗಳಾಗಿವೆ. ಅಲ್ಲಿಪುರ ಜಲಸಂಗ್ರಹ ಘಟಕದ ಒಟ್ಟು ಸಾಮರ್ಥ್ಯ 12,633 ಎಂಎಲ್ ಆಗಿದ್ದು, ಪ್ರಸ್ತುತ 7,200 ಎಂಎಲ್ ನೀರು ಲಭ್ಯವಿದೆ. ಇದು ಸುಮಾರು 65 ದಿನಗಳಿಗೆ ಸಾಕಾಗಲಿದೆ.
ಮೋಕಾದ ಒಂದು ಜಲಸಂಗ್ರಹ ಘಟಕದ 523 ಎಂಎಲ್ ಸಾಮರ್ಥ್ಯದಲ್ಲಿ 489.45 ಎಂಎಲ್ ನೀರಿದೆ. ಮತ್ತೊಂದು 710 ಎಂಎಲ್ ಸಾಮರ್ಥ್ಯದ ಘಟಕದಲ್ಲಿ 643 ಎಂಎಲ್ ನೀರು ಲಭ್ಯವಿದೆ. 800 ಎಂಎಲ್ ಸಾಮರ್ಥ್ಯದ ಹೊಸ ಘಟಕದಲ್ಲಿ 786 ಎಂಎಲ್ ನೀರು ಸಂಗ್ರಹವಾಗಿದೆ. ಈ ಮೂರು ಘಟಕಗಳಲ್ಲಿನ ನೀರು ಸುಮಾರು 33 ದಿನಗಳ ಪೂರೈಕೆಗೆ ಸಾಕಾಗಲಿದೆ. ಕಾಲುವೆಯಿಂದ ನೀರನ್ನು ಎತ್ತುವ ಮೂಲಕ ಸಂಗ್ರಹವನ್ನು ಕಾಯ್ದುಕೊಳ್ಳಲಾಗುತ್ತಿದೆ.
ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ಗಳಿದ್ದು, ತುಂಗಭದ್ರಾ ನದಿಯಲ್ಲಿ ಹರಿವು ಮುಂದುವರಿದಿದೆ. ಇದರಿಂದ ಸುಮಾರು ಮೂರು ತಿಂಗಳಿಗೆ ಸಾಕಾಗುವಷ್ಟು ನೀರು ಲಭ್ಯವಿದೆ. ಒಟ್ಟು 2,500 ಎಂಎಲ್ ಸಾಮರ್ಥ್ಯದ ಜಲಸಂಗ್ರಹ ಘಟಕದಲ್ಲಿ ಪ್ರಸ್ತುತ 1,150 ಎಂಎಲ್ ನೀರಿದ್ದು, ಇದು ಸುಮಾರು ಎರಡು ತಿಂಗಳ ಪೂರೈಕೆಗೆ ನೆರವಾಗಲಿದೆ.
ಕಂಪ್ಲಿ ಪುರಸಭೆಯ 23 ವಾರ್ಡ್ಗಳಿಗೆ ತುಂಗಭದ್ರಾ ನದಿಯಿಂದ ನೇರವಾಗಿ ನೀರು ಪಂಪ್ ಮಾಡಿ ಪೂರೈಸಲಾಗುತ್ತಿದೆ. ಪ್ರಸ್ತುತ ಲಭ್ಯತೆಯ ಆಧಾರದಲ್ಲಿ ಮೂರು ತಿಂಗಳವರೆಗೆ ನೀರು ಸಾಕಾಗಲಿದೆ.
ಕುರೆಕುಪ್ಪ ಪುರಸಭೆಯ 23 ವಾರ್ಡ್ಗಳಿಗೆ ಕೊಳವೆಬಾವಿ ಮತ್ತು ತೆರೆದ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಸಂಡೂರು ಪುರಸಭೆಯ 23 ವಾರ್ಡ್ಗಳಿಗೆ ನಾರಿಹಳ್ಳ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ಜಲಾಶಯದ ಒಟ್ಟು ಸಾಮರ್ಥ್ಯ 19,000 ಆಗಿದ್ದು, ಆರ್ಎಚ್ಸಿ ಕಾಲುವೆಯಿಂದ ನೇರವಾಗಿ ನೀರು ಎತ್ತಲಾಗುತ್ತಿದೆ. ಪ್ರಸ್ತುತ ಲಭ್ಯತೆಯ ಆಧಾರದಲ್ಲಿ ಸುಮಾರು ಆರು ತಿಂಗಳವರೆಗೆ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಅಂದಾಜಿಸಲಾಗಿದೆ.
ಕುರುಗೋಡು ಪುರಸಭೆಯ 23 ವಾರ್ಡ್ಗಳಿಗೆ ತುಂಗಭದ್ರಾ ಎಲ್ಎಲ್ಸಿ ಮತ್ತು ಜಲಸಂಗ್ರಹ ಘಟಕದ ಮೂಲಕ ನೀರು ಪೂರೈಸಲಾಗುತ್ತಿದೆ. ಒಟ್ಟು 400 ಎಂಎಲ್ ಸಾಮರ್ಥ್ಯದಲ್ಲಿ ಪ್ರಸ್ತುತ 380 ಎಂಎಲ್ ನೀರು ಲಭ್ಯವಿದ್ದು, ಇದು 75 ದಿನಗಳಿಗೆ ಸಾಕಾಗಲಿದೆ.
ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್ಗಳಿಗೆ ತುಂಗಭದ್ರಾ ಎಚ್ಎಲ್ಸಿ, ಜಲಸಂಗ್ರಹ ಘಟಕ ಮತ್ತು ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಒಟ್ಟು 280 ಎಂಎಲ್ ಸಾಮರ್ಥ್ಯದಲ್ಲಿ ಪ್ರಸ್ತುತ 140 ಎಂಎಲ್ ನೀರು ಲಭ್ಯವಿದ್ದು, ಇದು ಒಂದು ತಿಂಗಳಿಗೆ ಮಾತ್ರ ಸಾಕಾಗಲಿದೆ.
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 20 ವಾರ್ಡ್ಗಳಿಗೆ ತುಂಗಭದ್ರಾ ಎಲ್ಎಲ್ಸಿ ಬಾಗೇವಾಡಿ ವಿತರಣಾ ಕಾಲುವೆ ಮತ್ತು ಜಲಸಂಗ್ರಹ ಘಟಕದ ಮೂಲಕ ನೀರು ಪೂರೈಸಲಾಗುತ್ತಿದೆ. ಒಟ್ಟು 243 ಎಂಎಲ್ ಸಾಮರ್ಥ್ಯದಲ್ಲಿ 230 ಎಂಎಲ್ ನೀರು ಸಂಗ್ರಹವಿದ್ದು, ಮುಂದಿನ ಮೂರು ತಿಂಗಳವರೆಗೆ ಪೂರೈಕೆಗೆ ಸಾಕಾಗಲಿದೆ.
ನೀರು ಮಿತವಾಗಿ ಬಳಸಿ: ಜಿಲ್ಲಾಧಿಕಾರಿ ಮನವಿ
ಬರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸಾರ್ವಜನಿಕರು ನೀರನ್ನು ಮಿತವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಬೇಕು. ವಾಹನ ತೊಳೆಯುವುದು ಸೇರಿದಂತೆ ಅನಗತ್ಯ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ತಪ್ಪಿಸಬೇಕು. ನೀರಿನ ಮಿತವ್ಯಯದ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್