ಮಳೆಯ ಅಬ್ಬರಕ್ಕೆ ಮತ್ತೆ ಜಲಾವೃತವಾದ ಪಣತ್ತೂರು ರೈಲ್ವೆ ಅಂಡರ್ಪಾಸ್: ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆಗೆ ಪಣತ್ತೂರು ರೈಲ್ವೆ ಅಂಡರ್ಪಾಸ್ ಮತ್ತೆ ಜಲಾವೃತಗೊಂಡಿದ್ದು, ಹಲವು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಪದೇಪದೇ ಎದುರಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
panathur-railway-underpass-flooded-heavy-rain-bengaluru


ಬೆಂಗಳೂರು, 16 ಅಕ್ಟೋಬರ್ (ಹಿ.ಸ.):

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಹದೇವಪುರ ಕ್ಷೇತ್ರದ ಪಣತ್ತೂರು ರೈಲ್ವೆ ಅಂಡರ್ಪಾಸ್ ಮತ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ.

ಅಂಡರ್ಪಾಸ್ನಲ್ಲಿ ನೀರು ತುಂಬಿಕೊಂಡ ಪರಿಣಾಮ ಹಲವು ವಾಹನಗಳು ಮಧ್ಯದಲ್ಲೇ ಕೆಟ್ಟು ನಿಂತಿದ್ದು, ಸವಾರರು ವಾಹನಗಳನ್ನು ತಳ್ಳಿಕೊಂಡು ಹೊರಬರಲು ಹರಸಾಹಸ ಪಡಬೇಕಾಯಿತು.

ಮಳೆಯ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಅಂಡರ್ಪಾಸ್ ದಾಟಲು ವಾಹನ ಸವಾರರು ಪರದಾಡಿದರು. ಕೆಲವು ಕಾರುಗಳು ನೀರಿನಲ್ಲಿ ಸಿಲುಕಿಕೊಂಡು ಮುಂದೆ ಸಾಗಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಭಾಗದಲ್ಲಿ ಪದೇಪದೇ ಮಳೆ ನೀರು ಸಂಗ್ರಹವಾಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಐಟಿ ಹಬ್ನಲ್ಲೇ ಮೂಲಸೌಕರ್ಯದ ಕೊರತೆ?

ಪಣತ್ತೂರು ರೈಲ್ವೆ ಅಂಡರ್ಪಾಸ್ ಹೊರ ವರ್ತುಲ ರಸ್ತೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿದೆ. ಈ ಪ್ರದೇಶದ ಸುತ್ತಮುತ್ತ ಇಂಟೆಲ್, ಗೂಗಲ್, ಸಿಸ್ಕೊ, ಅಮೆಜಾನ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಕಚೇರಿಗಳಿವೆ.

ಬೆಂಗಳೂರಿನ ಪ್ರಮುಖ ಐಟಿ ವಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲೇ ಮಳೆ ಬಂದಾಗ ಸಂಚಾರ ಅಸ್ತವ್ಯಸ್ತವಾಗುತ್ತಿರುವುದು ಮೂಲಸೌಕರ್ಯ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ಪಣತ್ತೂರು ರೈಲ್ವೆ ಅಂಡರ್ಪಾಸ್ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ದಶಕ ಕಳೆದರೂ ರೈಲ್ವೆ ಅಂಡರ್ಬ್ರಿಡ್ಜ್ ಸಮಸ್ಯೆಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ನೈಋತ್ಯ ರೈಲ್ವೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಾಶ್ವತ ಪರಿಹಾರ ಯಾವಾಗ?

ಪ್ರತಿ ಬಾರಿ ಭಾರಿ ಮಳೆಯಾದಾಗ ಪಣತ್ತೂರು ಅಂಡರ್ಪಾಸ್ ಜಲಾವೃತವಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುವುದು ಸಾಮಾನ್ಯ ಸಮಸ್ಯೆಯಾಗಿದೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ಅಗತ್ಯವಾದ ಒಳಚರಂಡಿ ವ್ಯವಸ್ಥೆ ಹಾಗೂ ನೀರು ಹೊರಹಾಕುವ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande