ನಾಳೆ ಭಾರತ–ವೆಸ್ಟ್ ಇಂಡೀಸ್ ಪಂದ್ಯ: ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ ವಿಸ್ತರಣೆ
ಭಾರತ–ವೆಸ್ಟ್ ಇಂಡೀಸ್ ಟಿ20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿಯ ನಂತರವೂ ವಿಸ್ತರಿಸಲಾಗಿದೆ. ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ವಿವಿಧ ಮಾರ್ಗಗಳಲ್ಲಿ ಕೊನೆಯ ರೈಲುಗಳ ಸಂಚಾರದ ಸಮಯವನ್ನು ಬಿಎಂಆರ್ಸಿಎಲ್ ವಿಸ್ತರಿಸಿದೆ.
bommasandra-attibele-metro-extension-dpr-karnataka-government


ಬೆಂಗಳೂರು, 16 ಅಕ್ಟೋಬರ್ (ಹಿ.ಸ.):

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಅಕ್ಟೋಬರ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಟಿ20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿಯ ನಂತರವೂ ವಿಸ್ತರಿಸಲಾಗಿದೆ.

ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮಾಹಿತಿ ನೀಡಿದ್ದು, ಪಂದ್ಯ ವೀಕ್ಷಿಸಲು ಆಗಮಿಸುವ ಕ್ರಿಕೆಟ್ ಅಭಿಮಾನಿಗಳು ಮನೆಗೆ ಮರಳಲು ಅನುಕೂಲವಾಗುವಂತೆ ವಿವಿಧ ಮಾರ್ಗಗಳಲ್ಲಿ ಕೊನೆಯ ರೈಲುಗಳ ಸಂಚಾರದ ಸಮಯವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ವಿಸ್ತರಿತ ವೇಳಾಪಟ್ಟಿಯ ಪ್ರಕಾರ, ವೈಟ್ಫೀಲ್ಡ್ (ಕಾಡುಗೋಡಿ) ಮತ್ತು ಬೊಮ್ಮಸಂದ್ರದಿಂದ ರಾತ್ರಿ 12 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ. ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಮಾದಾವರ ನಿಲ್ದಾಣಗಳಿಂದ ರಾತ್ರಿ 12.15ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ರಾತ್ರಿ 1 ಗಂಟೆಗೆ ಕೊನೆಯ ರೈಲು ಹೊರಡಲಿದ್ದು, ಆರ್.ವಿ. ರಸ್ತೆ ನಿಲ್ದಾಣದಿಂದ ರಾತ್ರಿ 1.30ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಟಲ್ ಟಿ20 ಪಂದ್ಯದ ಟಿಕೆಟ್ಗಳಲ್ಲಿ ಎರಡು ಕಡೆಯ ಮೆಟ್ರೋ ಪ್ರಯಾಣಕ್ಕೆ ಸಂಬಂಧಿಸಿದ ಕ್ಯೂಆರ್ ಕೋಡ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದರಿಂದ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಕಡಿಮೆಯಾಗಲಿದೆ.

ಕ್ರೀಡಾಂಗಣದ ಕಬ್ಬನ್ ರಸ್ತೆ ಭಾಗದ ಪ್ರವೇಶ ದ್ವಾರಗಳನ್ನು ಬಳಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಹಾಗೂ ಲಿಂಕ್ ರಸ್ತೆ ಭಾಗದ ಪ್ರವೇಶ ದ್ವಾರಗಳನ್ನು ಬಳಸುವವರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

ಪಂದ್ಯದ ನಂತರ ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಪ್ರೇಕ್ಷಕರ ಸುಗಮ ಸಂಚಾರಕ್ಕೆ ಮೆಟ್ರೋ ಸೇವೆ ವಿಸ್ತರಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಜನದಟ್ಟಣೆಗೆ ಅನುಗುಣವಾಗಿ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಅಧಿಕಾರವನ್ನು ಬಿಎಂಆರ್ಸಿಎಲ್ ಕಾಯ್ದಿರಿಸಿದೆ. ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ಮತ್ತು ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande