ಐಎಸ್ಎಲ್ ಫುಟ್ಬಾಲ್: ನಾಳೆ ಬೆಂಗಳೂರು ಎಫ್ಸಿ–ಚೆನ್ನೈಯಿನ್ ಎಫ್ಸಿ ಹಣಾಹಣಿ
ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ನಾಳೆ ಬೆಂಗಳೂರು ಎಫ್ಸಿ ಹಾಗೂ ಚೆನ್ನೈಯಿನ್ ಎಫ್ಸಿ ತಂಡಗಳು ಕಂಠೀರವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
bengaluru-vs-chennaiyin


ಬೆಂಗಳೂರು, 16 ಅಕ್ಟೋಬರ್ (ಹಿ.ಸ.):

ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್ಸಿ ಹಾಗೂ ಚೆನ್ನೈಯಿನ್ ಎಫ್ಸಿ ತಂಡಗಳು ಶನಿವಾರ (ಅ.17) ಮುಖಾಮುಖಿಯಾಗಲಿವೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಉಭಯ ತಂಡಗಳ ನಡುವಿನ ಹಣಾಹಣಿಯತ್ತ ಫುಟ್ಬಾಲ್ ಅಭಿಮಾನಿಗಳ ಗಮನ ನೆಟ್ಟಿದೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ತವರಿನ ಕ್ರೀಡಾಂಗಣದಲ್ಲಿ ಆಡಲಿರುವ ಬೆಂಗಳೂರು ಎಫ್ಸಿ ತಂಡ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಚೆನ್ನೈಯಿನ್ ಎಫ್ಸಿ ತಂಡವೂ ಉತ್ತಮ ಪ್ರದರ್ಶನ ನೀಡುವ ಮೂಲಕ ಎದುರಾಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

ಬೆಂಗಳೂರು ಎಫ್ಸಿ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಎಸ್ಸಿ ದೆಹಲಿ ವಿರುದ್ಧ 3–2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಪಂದ್ಯದ ಕೊನೆಯ ಹಂತದಲ್ಲಿ ಗೋಲು ದಾಖಲಿಸಿ ಗೆಲುವು ತಂದುಕೊಟ್ಟಿದ್ದ ಬೆಂಗಳೂರು ತಂಡ, ಈ ಬಾರಿಯೂ ಆಕ್ರಮಣಕಾರಿ ಆಟದ ಮೂಲಕ ಅಂಕಗಳನ್ನು ಗಳಿಸುವ ನಿರೀಕ್ಷೆಯಲ್ಲಿದೆ.

ಚೆನ್ನೈಯಿನ್ ಎಫ್ಸಿ ವಿರುದ್ಧದ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಬೆಂಬಲ ಬೆಂಗಳೂರು ತಂಡಕ್ಕೆ ಪ್ರಮುಖ ಬಲವಾಗಲಿದೆ. ಆದರೆ, ಎದುರಾಳಿ ತಂಡದ ಸವಾಲನ್ನು ಮೆಟ್ಟಿನಿಂತು ಗೆಲುವು ಸಾಧಿಸಲು ರಕ್ಷಣಾ ವಿಭಾಗದಲ್ಲಿಯೂ ಎಚ್ಚರಿಕೆಯ ಆಟ ಪ್ರದರ್ಶಿಸಬೇಕಿದೆ.

ದಕ್ಷಿಣ ಭಾರತದ ಎರಡು ತಂಡಗಳ ನಡುವಿನ ಈ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ.

ಕೊನೆಯ ಕ್ಷಣದವರೆಗಿನ ರೋಮಾಂಚಕ ಹೋರಾಟ

ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಆಕ್ರಮಣಕಾರಿ ಆಟದ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿತ್ತು. ತಂಡದ ತಾರೆ ಬೋರ್ಜಾ ಮಾರ್ಟಿನೆಜ್ ಭರ್ಜರಿ ಎರಡು ಗೋಲುಗಳನ್ನು ಸಿಡಿಸಿ ಅಬ್ಬರಿಸಿದ್ದರು.

ವಿಶೇಷವಾಗಿ 75ನೇ ನಿಮಿಷದಲ್ಲಿ ಅವರು ಬಾರಿಸಿದ ಗೋಲು ತಂಡಕ್ಕೆ ಆನೆಬಲ ತಂದಿತ್ತು. ತದನಂತರ ಪಂದ್ಯ ಮುಗಿಯಲು ಕೇವಲ ಒಂದು ನಿಮಿಷ ಬಾಕಿ ಇದ್ದಾಗ ಮೆನ್ನೊ ಕೋಚ್ ಅವರು ಹೆಡರ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವ ಮೂಲಕ ಬಿಎಫ್ಸಿಗೆ ಅದ್ಭುತ ವಿಜಯ ತಂದುಕೊಟ್ಟಿದ್ದರು.

ಡಿಫೆನ್ಸ್ ವಿಭಾಗ ಇನ್ನು ಬಲಿಷ್ಠವಾಗಬೇಕು

ಮುಂಬರುವ ಪಂದ್ಯದ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯ ಕೋಚ್ ಪೆಪ್ ಮುನೋಝ್, ಮೊದಲ ಪಂದ್ಯದಲ್ಲಿ ದೆಹಲಿ ತಂಡ ನಮಗೆ ಅತ್ಯಂತ ಕಠಿಣ ಸವಾಲು ನೀಡಿತ್ತು.

ವೈಯಕ್ತಿಕ ಪೈಪೋಟಿಗಳಲ್ಲಿ ನಮ್ಮ ಆಟಗಾರರು ಇನ್ನು ಬಲವಾಗಿ ಹೋರಾಡಬೇಕಿದೆ ಮತ್ತು ರಕ್ಷಣಾ ವಿಭಾಗದಲ್ಲಿನ ಸಣ್ಣಪುಟ್ಟ ಲೋಪಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಚೆನ್ನೈಯಿನ್ ಎಫ್ಸಿ ತಂಡವು ಯಾವುದೇ ಕ್ಷಣದಲ್ಲೂ ತಿರುಗಿಬೀಳುವ ಸಾಮರ್ಥ್ಯ ಹೊಂದಿರುವ ಎದುರಾಳಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ಸೃಷ್ಟಿಸಲಿದೆಯೇ ಹಳೆಯ ಸೇಡು?

ಉಭಯ ತಂಡಗಳ ನಡುವಿನ ಪೈಪೋಟಿಗೆ ಸುದೀರ್ಘ ಇತಿಹಾಸವಿದೆ. 2017-18 ರ ಐಎಸ್ಎಲ್ ಫೈನಲ್ ಪಂದ್ಯದಲ್ಲಿ ಇದೇ ಕಂಠೀರವ ಮೈದಾನದಲ್ಲಿ ಚೆನ್ನೈಯಿನ್ ಎಫ್ಸಿ ತಂಡವು ಬೆಂಗಳೂರನ್ನು 3-2 ಗೋಲುಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ, ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ ಬಿಎಫ್ಸಿಯ ಸೆರ್ಟೊ ವೊರ್ನಿಲೆನ್ ಕೋಮ್ 89ನೇ ನಿಮಿಷದಲ್ಲಿ ಮ್ಯಾಜಿಕ್ ಗೋಲು ಬಾರಿಸಿ 2-1 ರಿಂದ ಚೆನ್ನೈಗೆ ತಿರುಗೇಟು ನೀಡಿದ್ದರು.

ಈ ಬಾರಿಯ ಪಂದ್ಯದ ಮತ್ತೊಂದು ವಿಶೇಷವೆಂದರೆ, ಚೆನ್ನೈಯಿನ್ ತಂಡದ ಪ್ರಮುಖ ರಕ್ಷಣಾ ಆಟಗಾರ ನಾಮ್ಗ್ಯಾಲ್ ಭುಟಿಯಾ ಅವರು ತಮ್ಮ ಹಳೆಯ ಕ್ಲಬ್ ಆದ ಬೆಂಗಳೂರು ಎಫ್ಸಿ ವಿರುದ್ಧವೇ ತಂತ್ರ ರೂಪಿಸಿ ಕಣಕ್ಕಿಳಿಯುತ್ತಿರುವುದು ಪಂದ್ಯದ ಕುತೂಹಲವನ್ನು ಇನ್ನು ಹೆಚ್ಚಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande