ನವೆಂಬರ್ 1ರಂದು ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ, 16 ಅಕ್ಟೋಬರ್ (ಹಿ.ಸ.): ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸ
ರಾಜ್ಯೋತ್ಸವದ ಪೂರ್ವಭಾವಿ ಸಭೆ


ಧಾರವಾಡ, 16 ಅಕ್ಟೋಬರ್ (ಹಿ.ಸ.):

ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಡೆದ ಕನ್ನಡ ಹೋರಾಟಗಳು ಹಾಗೂ ನಾಡಿನ ಏಕೀಕರಣ ಚಳವಳಿಗಳ ಇತಿಹಾಸವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ರೂಪಿಸಬೇಕು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ

ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲಾ ಮಕ್ಕಳನ್ನು ಹಾಗೂ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವಸತಿ ನಿಲಯಗಳ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಸೂಚಿಸಿದರು.

ಪೊಲೀಸ್ ಪಡೆ, ಜಿಲ್ಲಾ ಮೀಸಲು ಪೊಲೀಸ್ ಪಡೆ, ಜಿಲ್ಲಾ ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ರಾಷ್ಟ್ರೀಯ ವಿದ್ಯಾರ್ಥಿ ಪಡೆ, ಭಾರತ ಸೇವಾದಳ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕವಾಯತಿನಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವಂತೆ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಕ್ರೀಡಾ ಇಲಾಖೆಯು ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ಯಾಲರಿ ವ್ಯವಸ್ಥೆ ಮಾಡಬೇಕು. ಮಹಾನಗರ ಪಾಲಿಕೆಯಿಂದ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯೋತ್ಸವದ ಹಿಂದಿನ ದಿನ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಬೇಕು. ಲೋಕೋಪಯೋಗಿ ಇಲಾಖೆಯು ಸುಂದರ ವೇದಿಕೆ ನಿರ್ಮಿಸಬೇಕು ಎಂದು ನಿರ್ದೇಶನ ನೀಡಿದರು.

ಕುಡಿಯುವ ನೀರು, ಉಪಾಹಾರ ವ್ಯವಸ್ಥೆಗೆ ಸೂಚನೆ

ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿರುವ ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆಗಳ ಸಂಕ್ಷಿಪ್ತ ವರದಿಯನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು. ಈ ವರದಿಗಳ ಆಧಾರದಲ್ಲಿ ಸಚಿವರ ರಾಜ್ಯೋತ್ಸವ ಸಂದೇಶ ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಗೆ ಗೈರಾದ ಅಧಿಕಾರಿಗಳಿಗೆ ಎಚ್ಚರಿಕೆ ನೋಟಿಸ್

ಪೂರ್ವಾನುಮತಿ ಪಡೆಯದೆ ಸಭೆಗೆ ಗೈರಾಗಿದ್ದ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ತಮ್ಮ ಬದಲಿಗೆ ಪ್ರತಿನಿಧಿಗಳನ್ನು ಕಳುಹಿಸಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪೊಲೀಸ್ ಉಪ ಆಯುಕ್ತೆ ಶೃತಿ ಎನ್.ಎಸ್., ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರಣ್ಣಗೌಡ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪರಶುರಾಮ ಎಫ್.ಕೆ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande