ಜೇವರ್ಗಿ, ರಾಯಚೂರು ಕುಡಿಯುವ ನೀರಿಗೆ ಆದ್ಯತೆ ನೀಡಿ: ಅಜಯ್ ಧರ್ಮಸಿಂಗ್
ಬೆಂಗಳೂರು, 16 ಅಕ್ಟೋಬರ್ (ಹಿ.ಸ.): ಜೇವರ್ಗಿ ವಿಧಾನಸಭಾ ಕ್ಷೇತ್ರ ಹಾಗೂ ರಾಯಚಾಯಿ ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವುದರ ಜತೆಗೆ, ಕಾಲುವೆಗಳ ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು
ಕೃಷ್ಣಾ ಮೇಲ್ದಂಡೆ ಯೋಜನೆಯ 2026–27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆ


ಬೆಂಗಳೂರು, 16 ಅಕ್ಟೋಬರ್ (ಹಿ.ಸ.):

ಜೇವರ್ಗಿ ವಿಧಾನಸಭಾ ಕ್ಷೇತ್ರ ಹಾಗೂ ರಾಯಚಾಯಿ ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವುದರ ಜತೆಗೆ, ಕಾಲುವೆಗಳ ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಒತ್ತಾಯಿಸಿದರು.

ವಿಕಾಸಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 2026–27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಈ ಬೇಡಿಕೆಗಳನ್ನು ಮುಂದಿಟ್ಟರು. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಮುಂಗಾರು ಅವಧಿಯ ಬಾಕಿ ನೀರು ಬಿಡುಗಡೆ, ಹಿಂಗಾರು ಹಂಗಾಮು ಹಾಗೂ ಬೇಸಿಗೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಚರ್ಚಿಸಲಾಯಿತು.

ಜೇವರ್ಗಿ ವಿಧಾನಸಭಾ ಕ್ಷೇತ್ರದ ಜೇವರ್ಗಿ ಶಾಖಾ ಕಾಲುವೆ, ಎಡದಂಡೆ ಕಾಲುವೆ ಹಾಗೂ ಮುಖ್ಯ ಶಾಖಾ ಕಾಲುವೆಗಳ ಕೊನೆಯ ಭಾಗದಲ್ಲಿರುವ ಹಲವು ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ಜನರು ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಮುಂಬರುವ ಬೇಸಿಗೆಯವರೆಗೆ ಜೇವರ್ಗಿ ಕ್ಷೇತ್ರದ ಕುಡಿಯುವ ನೀರು ಹಾಗೂ ಅಗತ್ಯ ಬಳಕೆಗಾಗಿ 2.5 ಟಿಎಂಸಿ ನೀರನ್ನು ಕಾಯ್ದಿರಿಸಬೇಕು ಎಂದು ಸಚಿವರು ಆಗ್ರಹಿಸಿದರು.

ಜೇವರ್ಗಿ ಶಾಖಾ ಕಾಲುವೆಯ 40ರಿಂದ 86.36 ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ 50,425 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಈ ಪ್ರದೇಶಕ್ಕೆ ನಿಗದಿತ ಪ್ರಮಾಣದಲ್ಲಿ ಪ್ರತಿ ಸೆಕೆಂಡಿಗೆ 1,033 ಘನ ಅಡಿ ನೀರು ಹರಿಯಬೇಕಿದ್ದು, ಪ್ರಸ್ತುತ ಸುಮಾರು 500 ಘನ ಅಡಿ ಮಾತ್ರ ಹರಿಯುತ್ತಿದೆ. ಇದರಿಂದ ಪ್ರತಿ ಸೆಕೆಂಡಿಗೆ ಸುಮಾರು 533 ಘನ ಅಡಿ ನೀರಿನ ಕೊರತೆಯಾಗಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.

ಜೇವರ್ಗಿ ಮತ್ತು ಮುದಬಾಳ ಶಾಖಾ ಕಾಲುವೆಗಳು 25ರಿಂದ 30 ವರ್ಷ ಹಳೆಯದಾಗಿದ್ದು, ಸೋರಿಕೆ ಹಾಗೂ ನೀರಿನ ನಷ್ಟ ಉಂಟಾಗುತ್ತಿದೆ. ಹೀಗಾಗಿ, ಬಾಕಿ ಉಳಿದಿರುವ ಕಾಲುವೆಗಳ ನವೀಕರಣ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕೆಂಬಾವಿ ಹೆಡ್ ರೆಗುಲೇಟರ್ ಬಳಿಯ ತಡೆಗೋಡೆಯಿಂದ ನೀರಿನ ಹರಿವಿನ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ತಾಂತ್ರಿಕವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಯಚೂರು ನಗರಕ್ಕೆ 3 ಟಿಎಂಸಿ ನೀರು ಮೀಸಲಿಡಲು ಒತ್ತಾಯ

ಮುಂಬರುವ ಬೇಸಿಗೆಯಲ್ಲಿ ರಾಯಚೂರು ನಗರದ ಕುಡಿಯುವ ನೀರಿನ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ಈಗಿನಿಂದಲೇ 3 ಟಿಎಂಸಿ ನೀರನ್ನು ಕಾಯ್ದಿರಿಸಬೇಕು ಎಂದು ಡಾ. ಅಜಯ್ ಧರ್ಮಸಿಂಗ್ ಒತ್ತಾಯಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುಂಚಿತವಾಗಿಯೇ ನೀರಿನ ಲಭ್ಯತೆ ಮತ್ತು ಸಂಗ್ರಹಣೆಗೆ ಯೋಜನೆ ರೂಪಿಸಬೇಕು ಎಂದು ಹೇಳಿದರು.

ರಾಯಚೂರು ಜಿಲ್ಲೆಯ ದೇವದುರ್ಗ ಭಾಗದಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಗೇಟ್‌ಗಳ ಕಾರ್ಯಾಚರಣೆ ಹಾಗೂ ನೀರಿನ ಮಟ್ಟ ಅಳೆಯುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ವಿತರಣಾ ಕಾಲುವೆ 1ರಿಂದ 14ರವರೆಗೆ ನಡೆಯುತ್ತಿರುವ ಮೊದಲ ಹಂತದ ಸ್ವಯಂಚಾಲಿತ ಮೇಲ್ವಿಚಾರಣಾ ಮತ್ತು ನಿಯಂತ್ರಣ ವ್ಯವಸ್ಥೆಯ ಗೇಟ್‌ಗಳ ಅಳವಡಿಕೆಯ ಜತೆಗೆ, 15ರಿಂದ 18ರವರೆಗಿನ ಎರಡನೇ ಹಂತದ ಕಾಮಗಾರಿಯನ್ನೂ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದರಿಂದ ನೀರಿನ ವೈಜ್ಞಾನಿಕ ಹಂಚಿಕೆ, ಉಳಿತಾಯ ಹಾಗೂ ಕೊನೆಯಂಚಿನ ರೈತರಿಗೆ ಸಮರ್ಪಕ ಪೂರೈಕೆ ಸಾಧ್ಯವಾಗಲಿದೆ ಎಂದರು.

ಅಕ್ಟೋಬರ್ 25ರವರೆಗೆ ನೀರು ಬಿಡುಗಡೆ ವಿಸ್ತರಣೆ

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ನೀರು ಲಭ್ಯವಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ನೀರು ಬಿಡುಗಡೆಯನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲು ನೀರಾವರಿ ಸಲಹಾ ಸಮಿತಿ ಸಭೆ ನಿರ್ಧರಿಸಿತು. ಅಕ್ಟೋಬರ್ 26ರಿಂದ ನವೆಂಬರ್ 2ರವರೆಗೆ ಕಾಲುವೆಗಳನ್ನು ಬಂದ್ ಮಾಡಿ, ನವೆಂಬರ್ 3ರಿಂದ 12ರವರೆಗೆ ಮತ್ತೆ 10 ದಿನ ನೀರು ಹರಿಸಲು ತೀರ್ಮಾನಿಸಲಾಯಿತು.

ಹಿಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ನೀರು ಲಭ್ಯವಿಲ್ಲದ ಕಾರಣ ಹಿಂಗಾರು ನೀರಾವರಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಸಭೆ ತೀರ್ಮಾನಿಸಿತು. ಲಭ್ಯವಿರುವ ನೀರನ್ನು ಕುಡಿಯುವ ನೀರು, ಕೆರೆಗಳ ತುಂಬಿಸುವಿಕೆ ಹಾಗೂ ಇತರ ಅಗತ್ಯ ಬಳಕೆಗಳಿಗೆ ಕಾಯ್ದಿರಿಸಲು ನಿರ್ಧರಿಸಲಾಯಿತು.

ಕೊನೆಯಂಚಿನ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಅನಧಿಕೃತವಾಗಿ ನೀರು ಎತ್ತುವುದನ್ನು ತಡೆಯಲು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ನಿಗಾ ವಹಿಸಬೇಕು ಎಂದು ಸೂಚಿಸಲಾಯಿತು.

ಲಭ್ಯವಿರುವ ನೀರಿನ ಪ್ರತಿಯೊಂದು ಹನಿಯನ್ನೂ ಸಮರ್ಪಕವಾಗಿ ಬಳಸಬೇಕು. ಜೇವರ್ಗಿ ಮತ್ತು ರಾಯಚೂರು ಭಾಗದ ಜನರು, ಜಾನುವಾರುಗಳು ಹಾಗೂ ಕೊನೆಯಂಚಿನ ರೈತರಿಗೆ ಅಗತ್ಯ ನೀರು ತಲುಪಿಸುವುದು ಆದ್ಯತೆಯಾಗಿದೆ. ಹಳೆಯ ಕಾಲುವೆಗಳ ಆಧುನೀಕರಣ ಮತ್ತು ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಯ ಮೂಲಕ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸಬೇಕು ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande