ಮೈಸೂರು–ಮಡಿಕೇರಿ ಮಾರ್ಗದಲ್ಲಿ ಭೀಕರ ಅಪಘಾತ: ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಮೈಸೂರು, 16 ಅಕ್ಟೋಬರ್ (ಹಿ.ಸ.): ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೀರನಹಳ್ಳಿ ಗೇಟ್ ಬಳಿ ಖಾಸಗಿ ಬಸ್‌ ಮತ್ತು ಲಾರಿ ನಡುವೆ ಶುಕ್ರವಾರ ಮುಂಜಾನೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರನ್ನು ಮೈಸೂರಿನ ಬಸ್ ಚಾಲಕ ಸುನಿಲ್
ಅಪಘಾತ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ. ಚಿತ್ರ ಕೃಪೆ ಎಸ್.ಪಿ.ಕಚೇರಿ


ಮೈಸೂರು, 16 ಅಕ್ಟೋಬರ್ (ಹಿ.ಸ.):

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೀರನಹಳ್ಳಿ ಗೇಟ್ ಬಳಿ ಖಾಸಗಿ ಬಸ್‌ ಮತ್ತು ಲಾರಿ ನಡುವೆ ಶುಕ್ರವಾರ ಮುಂಜಾನೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮೃತರನ್ನು ಮೈಸೂರಿನ ಬಸ್ ಚಾಲಕ ಸುನಿಲ್ (26), ನಿರ್ವಾಹಕ ಸಂದೇಶ್ (25) ಮತ್ತು ಪ್ರಯಾಣಿಕ ಅಫ್ತಾಬ್ (23) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತರ ಗುರುತು ಪತ್ತೆಯಾಗಿಲ್ಲ.

ಮೈಸೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ, ಮಡಿಕೇರಿ ಕಡೆಯಿಂದ ಮೈಸೂರಿನತ್ತ ಬರುತ್ತಿದ್ದ ಲಾರಿ ಮುಂಜಾನೆ ಸುಮಾರು 3.30ರ ವೇಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ಮತ್ತು ಲಾರಿ ಸಂಪೂರ್ಣ ನಜ್ಜುಗುಜ್ಜಾಗಿವೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮರದ ಕೊಂಬೆಯೊಂದು ರಸ್ತೆಗೆ ಬಿದ್ದಿತ್ತು ಎನ್ನಲಾಗಿದೆ. ರಸ್ತೆಯಲ್ಲಿದ್ದ ಕೊಂಬೆಯನ್ನು ತಪ್ಪಿಸುವ ವೇಳೆ ಲಾರಿ ಎದುರಿನಿಂದ ಬಂದ ಖಾಸಗಿ ಬಸ್‌ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಾಯಗೊಂಡ 20ಕ್ಕೂ ಹೆಚ್ಚು ಪ್ರಯಾಣಿಕರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿ ಅಪಘಾತಕ್ಕೆ ನಿಖರ ಕಾರಣ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande