ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವಿಗೆ ಅಣಕು ಯುವ ಸಂಸತ್: ಪ್ರಭುಲಿಂಗ ಕವಳಿಕಟ್ಟಿ
ಶಿವಮೊಗ್ಗ, 16 ಅಕ್ಟೋಬರ್ (ಹಿ.ಸ.): ವಿದ್ಯಾರ್ಥಿಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸಿ, ನಾಯಕತ್ವದ ಗುಣಗಳನ್ನು ಬೆಳೆಸಲು ಅಣಕು ಯುವ ಸಂಸತ್ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯ ಪೂರ್ವಸ
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವಿಗೆ ಅಣಕು ಯುವ ಸಂಸತ್: ಪ್ರಭುಲಿಂಗ ಕವಳಿಕಟ್ಟಿ


ಶಿವಮೊಗ್ಗ, 16 ಅಕ್ಟೋಬರ್ (ಹಿ.ಸ.):

ವಿದ್ಯಾರ್ಥಿಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸಿ, ನಾಯಕತ್ವದ ಗುಣಗಳನ್ನು ಬೆಳೆಸಲು ಅಣಕು ಯುವ ಸಂಸತ್ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ, ಸಂಸದೀಯ ವ್ಯವಸ್ಥೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಸಂಸತ್ತು ಮತ್ತು ವಿಧಾನಮಂಡಲದ ಕಾರ್ಯವೈಖರಿ, ಪ್ರಶ್ನೋತ್ತರ ಕಲಾಪ, ನಿರುದ್ಯೋಗ, ಶಿಕ್ಷಣದ ಗುಣಮಟ್ಟ, ಮಾದಕ ವಸ್ತುಗಳ ದುಷ್ಪರಿಣಾಮ, ಪರಿಸರ ಸಂರಕ್ಷಣೆ, ಕಸ್ತೂರಿ ರಂಗನ್ ವರದಿ ಹಾಗೂ ಚುನಾವಣಾ ಸುಧಾರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅನುಷ್ಠಾನಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ, ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಡಾ. ಮೈತ್ರಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರಸ್ವಾಮಿ ಜಿ. ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande