
ನವದೆಹಲಿ, 16 ಅಕ್ಟೋಬರ್ (ಹಿ.ಸ.):
ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ)ಯ 42ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯೋಧರಿಗೆ ಶುಭಾಶಯ ಕೋರಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅವರ ನಿರಂತರ ಜಾಗರೂಕತೆ, ಸಾಹಸ ಮತ್ತು ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎನ್ಎಸ್ಜಿ ಯೋಧರು ಧೈರ್ಯ, ನಿಖರ ಕಾರ್ಯಾಚರಣೆ ಮತ್ತು ಕರ್ತವ್ಯದ ಬಗೆಗಿನ ಅಚಲ ಬದ್ಧತೆಯ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಅವರು ನಿರಂತರವಾಗಿ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಹಾಗೂ ದೇಶದ ನಾಗರಿಕರು ಮತ್ತು ಪ್ರಮುಖ ರಾಷ್ಟ್ರೀಯ ಆಸ್ತಿಗಳ ರಕ್ಷಣೆಗೆ ಸದಾ ಸನ್ನದ್ಧರಾಗಿರುವುದು ಅಪಾರ ವಿಶ್ವಾಸ ಮತ್ತು ಹೆಮ್ಮೆಯನ್ನು ಮೂಡಿಸುತ್ತದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ ದೇಶದ ವಿಶೇಷ ಭಯೋತ್ಪಾದನಾ ನಿಗ್ರಹ ಪಡೆಯಾಗಿದ್ದು, ‘ಕಪ್ಪು ಬೆಕ್ಕುಗಳು’ ಎಂದೇ ಪ್ರಸಿದ್ಧವಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಪಡೆ, ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕುವುದು ಮತ್ತು ವಿಶೇಷ ಭದ್ರತಾ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.