
ಕಾರವಾರ, 16 ಅಕ್ಟೋಬರ್ (ಹಿ.ಸ.):
ದೇಶದ ಸಾರ್ವಭೌಮತ್ವ ಮತ್ತು ಸಮುದ್ರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಸಲ್ಲಿಸುತ್ತಿರುವ ವಿಶಿಷ್ಟ ಸೇವೆಯನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶ್ಲಾಘಿಸಿದ್ದಾರೆ.
ಕರ್ನಾಟಕದ ಕಾರವಾರದಲ್ಲಿರುವ ಕದಂಬ ನೌಕಾ ನೆಲೆಯಲ್ಲಿ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಬಹುಪಯೋಗಿ ಹಡಗು ‘ಐಎನ್ಎಸ್ ಸಮರ್ಥಕ್’ ಅನ್ನು ಶುಕ್ರವಾರ ನೌಕಾಪಡೆಗೆ ಸೇರ್ಪಡೆಗೊಳಿಸಿದ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳು, ಭಾರತೀಯ ನಾಗರಿಕರ ಸ್ಥಳಾಂತರ ಹಾಗೂ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನೌಕಾಪಡೆ ಮೊದಲ ಪ್ರತಿಸ್ಪಂದಕವಾಗಿ ಮತ್ತು ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ನಿರ್ವಹಿಸುತ್ತಿರುವ ಪಾತ್ರವನ್ನೂ ಉಪರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶೇ. 75ಕ್ಕೂ ಹೆಚ್ಚು ಸ್ವದೇಶಿ ಪರಿಕರಗಳ ಬಳಕೆ
‘ಐಎನ್ಎಸ್ ಸಮರ್ಥಕ್’ ಹಡಗಿನ ನಿರ್ಮಾಣದಲ್ಲಿ ಶೇ. 75ಕ್ಕೂ ಹೆಚ್ಚು ಸ್ವದೇಶಿ ಪರಿಕರಗಳನ್ನು ಬಳಸಲಾಗಿದೆ. ಇದು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಹೆಚ್ಚುತ್ತಿರುವ ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತದೆ.
ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಮಾನವರಹಿತ ವ್ಯವಸ್ಥೆಗಳ ಪರೀಕ್ಷೆಗಳಿಗೆ ಈ ಹಡಗು ನೆರವಾಗಲಿದೆ. ತಾಂತ್ರಿಕವಾಗಿ ಮುಂದುವರಿದ, ಬಲಿಷ್ಠ ಹಾಗೂ ಸ್ವಾವಲಂಬಿ ಭಾರತೀಯ ನೌಕಾಪಡೆಯ ನಿರ್ಮಾಣದತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.