
ಬೆಂಗಳೂರು, 16 ಅಕ್ಟೋಬರ್ (ಹಿ.ಸ.):
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ನೋಂದಣಿ ಹಾಗೂ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅಕ್ಟೋಬರ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಈಗಾಗಲೇ ಶೇ.97.45ರಷ್ಟು ನೋಂದಣಿ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಗ್ರಾಹಕರಿಗೆ ನೋಂದಣಿ ಮಾಡಿಸಿಕೊಳ್ಳಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಒಟ್ಟು 74.30 ಲಕ್ಷ ಫಲಾನುಭವಿಗಳ ಪೈಕಿ ಸುಮಾರು 72.40 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಮನೆಗೆ ಬೀಗ ಹಾಕಿರುವುದು, ಗ್ರಾಹಕರು ಮನೆಯಲ್ಲಿ ಇಲ್ಲದಿರುವುದು ಹಾಗೂ ಮನೆ ಖಾಲಿ ಇರುವುದು ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಫಲಾನುಭವಿಗಳು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ.
ಮನೆಗೆ ಬೀಗ ಹಾಕಿದ್ದವರಿಗೂ ಅವಕಾಶ
ನೋಂದಣಿ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದಿದ್ದವರು, ಮನೆ ಖಾಲಿ ಇದ್ದ ಕಾರಣ ಸಮೀಕ್ಷೆಗೆ ಒಳಪಡದವರು ಹಾಗೂ ಇನ್ನಿತರ ಕಾರಣಗಳಿಂದ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಸರ್ಕಾರ ಕಾಲಾವಕಾಶ ವಿಸ್ತರಿಸಿದೆ. ಇಂತಹ ಗ್ರಾಹಕರು ತಮ್ಮ ಸಮೀಪದ ಬೆಸ್ಕಾಂ ಉಪವಿಭಾಗ ಕಚೇರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.
ಮನೆ ಮನೆಗೆ ತೆರಳಿ ನೋಂದಣಿ
ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳು ಮನೆ ಮನೆಗೆ ತೆರಳಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದರ ಜೊತೆಗೆ, ಫಲಾನುಭವಿಗಳು ಸ್ವತಃ ಸಮೀಪದ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕವೂ ನೋಂದಣಿ ಮಾಡಿಸಿಕೊಳ್ಳಬಹುದು.
ಅಕ್ಟೋಬರ್ 31 ನೋಂದಣಿಗೆ ಕೊನೆಯ ದಿನವಾಗಿರುವುದರಿಂದ, ಈವರೆಗೆ ನೋಂದಣಿ ಮಾಡಿಸಿಕೊಳ್ಳದ ಅರ್ಹ ಗ್ರಾಹಕರು ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದರಿಂದ ಸಮೀಕ್ಷೆಯಿಂದ ಹೊರಗುಳಿದ ಫಲಾನುಭವಿಗಳಿಗೂ ಗೃಹಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R