

ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)
ದೈನಂದಿನ ಆಹಾರ ಪದ್ಧತಿಯಲ್ಲಿ ಹೈನುಗಾರಿಕೆಯ ಉತ್ಪನ್ನಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಲು, ಮೊಸರು ಸೇರಿದಂತೆ ಇತರೆ ಹಾಲಿನ ಉತ್ಪನ್ನಗಳನ್ನು ಸಮತೋಲನ ಪ್ರಮಾಣದಲ್ಲಿ ಸೇವಿಸಬೇಕು ಎಂದು ಪಶು ವಿಜ್ಞಾನ ಪ್ರಾಧ್ಯಾಪಕ ಡಾ.ರಮೇಶ್ ಬಿ.ಕೆ. ಅವರು ಹೇಳಿದರು.
ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಅಧೀನದ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಹಗರಿ ಹಾಗೂ ಸಿ.ಐ.ಐ. ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಆಹಾರ ದಿನಾಚರಣೆ-2026’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಪ್ರಭಾರ ಅಧಿಕಾರಿ ಡಾ. ರವಿಶಂಕರ್ ಜಿ. ಅವರು ಮಾತನಾಡಿ, ಈ ವರ್ಷದ ವಿಶ್ವ ಆಹಾರ ದಿನವನ್ನು “ಇಂದಿನ ನಾವೀನ್ಯತೆ ನಾಳಿನ ಪೋಷಣೆ” ಎಂಬ ಧೈಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೃಷಿ ಮಹಾವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಶಿಲ್ಪಾ ಹೆಚ್. ಅವರು, ರೈತ ಮಹಿಳೆಯರಿಗೆ ಸಮತೋಲನ ಆಹಾರದ ಅರಿವು, ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕುರಿತು ಮಾಹಿತಿ ಹಂಚಿಕೊ0ಡರು.
ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಗಿರೀಶ್ ಅವರು ನಿತ್ಯ ಜೀವನದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ವಿವರಿಸಿದರೆ, ಬೇಸಾಯ ಶಾಸ್ತçದ ಪ್ರಾಧ್ಯಾಪಕ ಡಾ. ಮಂಜುನಾಥ್ ಎನ್. ಅವರು ರೈತರು ತಮ್ಮ ಜಮೀನಿನಲ್ಲಿ ಮನೆ ಬಳಕೆಗೆ ಅಗತ್ಯವಾದ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆದು ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಸಿ.ಐ.ಐ. ಫೌಂಡೇಷನ್ ಕಾರ್ಯಕ್ರಮ ವ್ಯವಸ್ಥಾಪಕ ವಿಕ್ರಮ್ ಎಂ. ನಿಂಬಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ. ಮೌಲ್ಯವರ್ಧನೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಮಹಿಳೆಯರು ಸಬಲೀಕರಣಗೊಳ್ಳಬೇಕು ಹಾಗೂ ಪೌಷ್ಟಿಕ ಆಹಾರದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೆವಿಕೆ ವಿಜ್ಞಾನಿಗಳು ಪೌಷ್ಟಿಕ ಆಹಾರ ಸೇವನೆ ಮತ್ತು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಹಾಗೂ ಕೆವಿಕೆ ಮುಖ್ಯಸ್ಥ ಡಾ. ರವಿ ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ವಿಸ್ತರಣೆ ವಿಜ್ಞಾನಿ ಡಾ. ನವೀನ್ ಕುಮಾರ್ ಪಿ. ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ರವಿಕುಮಾರ್ ಎ. ಸೇರಿದಂತೆ ಬಳ್ಳಾರಿ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು 58ಕ್ಕೂ ಹೆಚ್ಚು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್