
ಬಾಗಲಕೋಟೆ, 16 ಅಕ್ಟೋಬರ್ (ಹಿ.ಸ.)
ಶಾಸಕ ಉಮೇಶ ಮೇಟಿ ಅವರ ಸಹೋದರಿ ಮಹಾದೇವಿ ಯರಗಲ್ ಅವರ ನಿಲುವು ಹಾಗೂ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ನ ಮುಸ್ಲಿಂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ನಗರದ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಮಹಾದೇವಿ ಯರಗಲ್ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅವರ ಇತ್ತೀಚಿನ ನಿಲುವು, ದ್ವಂದ್ವ ಹೇಳಿಕೆಗಳು ಹಾಗೂ ವರ್ತನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತ ಅಶ್ಫಾಕ್ ಅಲಿ, “ಮಹಾದೇವಿ ಯರಗಲ್ ಅವರು ತಮ್ಮ ನಿಲುವು ಹಾಗೂ ದ್ವಂದ್ವ ಹೇಳಿಕೆಗಳನ್ನು ಬದಲಿಸಬೇಕು. ಪಕ್ಷದ ಕಾರ್ಯಕರ್ತರು ಹಾಗೂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ವೈಯಕ್ತಿಕ ಹೇಳಿಕೆಗಳು ಮತ್ತು ವರ್ತನೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಘೋಷಣೆಗಳು ಮೊಳಗಿದ್ದು, ಕಾರ್ಯಕರ್ತರ ಅಸಮಾಧಾನ ಬಹಿರಂಗಗೊಂಡಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande