ಬಳ್ಳಾರಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರ ರಾಜೀನಾಮೆ
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.) ಬಳ್ಳಾರಿ ಜಿಲ್ಲಾ ಕುರುಬ ಸಂಘದ ಪದಾಧಿಕಾರಿಗಳ ಚುನಾವಣೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರಾದ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ `ರಾಜೀನಾಮೆ'' ಪತ್ರವನ್ನು ಸಲ್ಲಿಸುವ ಮೂಲಕ ಸಂಘದ ಕಾರ್ಯಚಟುವಟಿಕೆಗಳಲ್ಲಿಯ ಭಿನ್
Ballari District Shepherds Association President 'resigns'


ಬಳ್ಳಾರಿ, 16 ಅಕ್ಟೋಬರ್ (ಹಿ.ಸ.)

ಬಳ್ಳಾರಿ ಜಿಲ್ಲಾ ಕುರುಬ ಸಂಘದ ಪದಾಧಿಕಾರಿಗಳ ಚುನಾವಣೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರಾದ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ `ರಾಜೀನಾಮೆ' ಪತ್ರವನ್ನು ಸಲ್ಲಿಸುವ ಮೂಲಕ ಸಂಘದ ಕಾರ್ಯಚಟುವಟಿಕೆಗಳಲ್ಲಿಯ ಭಿನ್ನಾಭಿಪ್ರಾಯಗಳನ್ನು ಬಯಲಿಗೆ ಎಳೆದಿದ್ದಾರೆ.

ಬಳ್ಳಾರಿ ಜಿಲ್ಲಾ ಕುರುಬ ಸಂಘದ ಆವರಣದಲ್ಲಿ ಕಟ್ಟಡ ನಿರ್ಮಾಣ ಸೇರಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಂಘದಲ್ಲಿ ಪ್ರಭಾವಿಯಾಗಿದ್ದ ಡಾ. ಪಿ.ಎಲ್. ಗಾದಿಲಿಂಗನಗೌಡರು ಸಂಘದ ಪದಾಧಿಕಾರಿಗಳ ಸಭೆಯಲ್ಲಿ `ರಾಜೀನಾಮೆ'ಪತ್ರವನ್ನು ಸಲ್ಲಿಸದೇ ಸಹಕಾರ ಸಂಘಗಳ ಉಪ ನಿಬಂಧಕ ರಿಗೆ ರಾಜೀನಾಮೆ ಸಲ್ಲಿಸಿರುವುದು ಸಂಘದ ಆಜೀವ ಸದಸ್ಯರು ಸೇರಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಬಳ್ಳಾರಿ ಜಿಲ್ಲಾ ಕುರುಬ ಸಂಘದ ಬೈಲಾ ಪ್ರಕಾರ, ಪ್ರತಿ ಮೂರು ವರ್ಷಕ್ಕೊಮ್ಮೆ 31 ನಿರ್ದೇಶಕರ ಹುದ್ದೆಗಳಿಗೆ ಚುನಾವಣೆ ನಡೆಯಬೇಕು. ಈ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳನ್ನು ಚುನಾಯಿಸುತ್ತಾರೆ. ಬಳ್ಳಾರಿ ಜಿಲ್ಲಾ ಕುರುಬ ಸಂಘವು ನಾಡಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಹಜವಾಗಿಯೇ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಮಾಜದ ಗಣ್ಯರು ಒಗ್ಗಟ್ಟನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

2023ರ ನವೆಂಬರ್ 8ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಬೈಲಾ ಉಲ್ಲಂಘನೆಯಾಗಿದೆ ಎಂದು ಅಪಸ್ವರ ಕೇಳಿತ್ತು. ಆಗ, ಸರ್ಕಾರವು ಸಂಘದ ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಆಡಳಿತಾಧಿಕಾರಿಯು 2023ರ ಅಕ್ಟೋಬರ್ 29ರಂದು 31 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಸಿ, ಡಾ. ಪಿ.ಎಲ್. ಗಾದಿಲಿಂಗನಗೌಡ ಅವರು ಅಧ್ಯಕ್ಷರಾಗಿ, ಕೆ. ಮೋಹನ್ ಪ್ರಧಾನ ಕಾರ್ಯದರ್ಶಿಯಾಗಿ, ಕೆ.ಎಚ್. ಕಾಮರಾಜ್ ಅವರು ಖಜಾಂಚಿಯಾಗಿ, ಕೆ. ನಾಗರಾಜ್ ಉಪಾಧ್ಯಕ್ಷರಾಗಿ, ಕೆ.ಬಿ. ಅಂಜಿನಿ ಅವರು ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಕೆ. ಆರ್. ಪಂಪಾಪತಿ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಆದ ನಂತರ, ತಮ್ಮ ಜವಾಬ್ದಾರಿಯಿಂದ ನಿರ್ಗಮಿಸಿದ್ದರು.

ಸಂಘದ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಸೋತಿದ್ದ ಕೆಲ ಅಭ್ಯರ್ಥಿಗಳು 2023ರ ಅಕ್ಟೋಬರ್ 29 ರಂದು 31 ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯನ್ನು ಪ್ರಶ್ನಿಸಿ, ನ್ಯಾಯಾಲಯಕ್ಕೆ ಹೋಗಿದ್ದರು. ವಿವಾದವು ನ್ಯಾಯಾಲಯದಲ್ಲಿ `ತಡೆಯಾಜ್ಞೆ' ಆಗಿತ್ತು. ಈ ಮಧ್ಯೆ ಸಂಘದ ಅಧ್ಯಕ್ಷರು 2026ರ ಅಕ್ಟೋಬರ್ 3ರಂದು `ರಾಜೀನಾಮೆ' ಸಲ್ಲಿಸಿರುವುದು ಗಮನಾರ್ಹ.

ಆದರೆ, ಸಹಕಾರ ಸಂಘಗಳ ಉಪ ನಿಬಂಧಕರು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರ `ರಾಜೀನಾಮೆ'ಯ ಮೂಲಪ್ರತಿಯನ್ನು ಲಗತ್ತಿಸಿ, `ಅಧ್ಯಕ್ಷರ ರಾಜೀನಾಮೆಯನ್ನು ಸ್ವೀಕರಿಸುವ ಅಧಿಕಾರ ತಮಗಿಲ್ಲ' ಎಂದು ಸ್ಪಷ್ಟಪಡಿಸಿ, ಅಧ್ಯಕ್ಷರ ರಾಜೀನಾಮೆ ಪತ್ರವನ್ನು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿಗಳಿಗೆ ಅಕ್ಟೋಬರ್ 14ರಂದು ಕಳುಹಿಸಿ, `ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಬೇಕು' ಎಂದು ಸೂಚಿಸಿದ್ದಾರೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್, ಸಂಘಟನಾ ಕಾರ್ಯದರ್ಶಿ ಕೆ.ಬಿ. ಅಂಜಿನಿ ಹಾಗೂ ಜಂಟಿ ಕಾರ್ಯದರ್ಶಿ ಕೆ.ಆರ್. ಪಂಪಾಪತಿ ಅವರು, ಸುದ್ದಿಗಾರರ ಜೊತೆ ಮಾತನಾಡಿ, `ಅನಧಿಕೃತ ಸಮಿತಿಯನ್ನು ರಚಿಸಿಕೊಂಡಿರುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಆದರೆ, ಈ ವಿವಾದವನ್ನು `ಸಮಾಜದ ಗಣ್ಯರು' ಶೀಘ್ರವೇ ಇತ್ಯರ್ಥ ಮಾಡದೇ ಹೋದಲ್ಲಿ, ಅತ್ಯಂತ ಬಲಿಷ್ಠವಾದ ಸಮಾಜದಲ್ಲಿ ಒಡಕು ಮೂಡಿ ಭಿನ್ನಾಭಿಪ್ರಾಯಗಳೇ ದೊಡ್ಡವಾಗಿ ಸಮಾಜದಲ್ಲಿ ಒಗ್ಗಟ್ಟು ಮರೆಯಾಗುವ ಅಪಾಯವಿದೆ ಎಂದು ಕುರುಬ ಸಮಾಜದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande