
ಧಾರವಾಡ, 16 ಅಕ್ಟೋಬರ್ (ಹಿ.ಸ.):
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರಡಿ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 13,53,946 ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯಲ್ಲಿ 6,75,857 ಪುರುಷರು, 6,78,023 ಮಹಿಳೆಯರು ಹಾಗೂ 66 ಇತರೆ ಮತದಾರರಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರವಾರು ಮತದಾರರ ವಿವರ: ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 2,17,195, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ 2,04,314, ಧಾರವಾಡದಲ್ಲಿ 1,93,578, ನವಲಗುಂದದಲ್ಲಿ 1,93,334, ಕಲಘಟಗಿಯಲ್ಲಿ 1,86,766, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 1,81,334 ಹಾಗೂ ಕುಂದಗೋಳದಲ್ಲಿ 1,77,425 ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,707 ಮತಗಟ್ಟೆಗಳನ್ನು ಗುರುತಿಸಲಾಗಿದೆ. ನವಲಗುಂದದಲ್ಲಿ 242, ಕುಂದಗೋಳದಲ್ಲಿ 219, ಧಾರವಾಡದಲ್ಲಿ 247, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 227, ಸೆಂಟ್ರಲ್ನಲ್ಲಿ 267, ಪಶ್ಚಿಮದಲ್ಲಿ 267 ಹಾಗೂ ಕಲಘಟಗಿಯಲ್ಲಿ 238 ಮತಗಟ್ಟೆಗಳಿವೆ.
70,844 ಅರ್ಜಿಗಳ ಸ್ವೀಕೃತಿ: ಜೂನ್ 16ರಿಂದ ಅಕ್ಟೋಬರ್ 14ರವರೆಗೆ ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ನಮೂನೆ-6ರಲ್ಲಿ 26,872, ನಮೂನೆ-6ಎರಲ್ಲಿ 76, ಹೆಸರು ತೆಗೆದುಹಾಕುವ ನಮೂನೆ-7ರಲ್ಲಿ 4,376 ಹಾಗೂ ವಿವರಗಳ ತಿದ್ದುಪಡಿ ಮತ್ತು ಇತರ ಬದಲಾವಣೆಗಳ ನಮೂನೆ-8ರಲ್ಲಿ 39,520 ಅರ್ಜಿಗಳು ಸೇರಿದಂತೆ ಒಟ್ಟು 70,844 ಅರ್ಜಿಗಳು ಸ್ವೀಕೃತವಾಗಿವೆ.
14,316 ಯುವ ಮತದಾರರು: ಜಿಲ್ಲೆಯಲ್ಲಿ 18ರಿಂದ 19 ವರ್ಷದೊಳಗಿನ 14,316 ಯುವ ಮತದಾರರಿದ್ದು, ಅವರಲ್ಲಿ 7,868 ಪುರುಷರು ಹಾಗೂ 6,448 ಮಹಿಳೆಯರಿದ್ದಾರೆ. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮನವಿ ಮಾಡಿದರು.
ಮತದಾರರ ನೋಂದಣಿ ಉತ್ತೇಜಿಸಲು ಆಗಸ್ಟ್ 29 ಮತ್ತು 30 ಹಾಗೂ ಸೆಪ್ಟೆಂಬರ್ 19 ಮತ್ತು 20ರಂದು ವಿಶೇಷ ನೋಂದಣಿ ಅಭಿಯಾನಗಳನ್ನು ನಡೆಸಲಾಗಿತ್ತು. ಕರಡು ಪಟ್ಟಿ ಪ್ರಕಟವಾದ ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಅಕ್ಟೋಬರ್ 16ರವರೆಗಿನ ವರದಿಯಂತೆ ಜಿಲ್ಲೆಯಲ್ಲಿ ಒಟ್ಟು 47,978 ನೋಟಿಸ್ಗಳನ್ನು ಸಿದ್ಧಪಡಿಸಿ ವಿತರಿಸಲಾಗಿದ್ದು, ಅವುಗಳ ವಿಲೇವಾರಿ ಹಾಗೂ ವಿಚಾರಣೆ ಪ್ರಕ್ರಿಯೆ ಮುಂದುವರಿದಿದೆ. ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿ ಕಾರ್ಯ ಅಕ್ಟೋಬರ್ 22ರವರೆಗೆ ನಡೆಯಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಮತದಾರರು ಹೆಸರು, ವಿಳಾಸ ಸೇರಿದಂತೆ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಅರ್ಹರು ಮತದಾರರ ನೋಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.