
ಹೈದರಾಬಾದ್, 15 ಅಕ್ಟೋಬರ್ (ಹಿ.ಸ.):
ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 24 ರನ್ಗಳಿಂದ ಸೋಲನುಭವಿಸಲು ತಿಲಕ್ ವರ್ಮಾ ಅವರ ವಿಕೆಟ್ ನಿರ್ಣಾಯಕ ತಿರುವಾಯಿತು ಎಂದು ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಬುಧವಾರ ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಶಾಯ್ ಹೋಪ್ ಅವರ ಶತಕ ಹಾಗೂ ಕೀಮೋ ಪಾಲ್ ಅವರ ಐದು ವಿಕೆಟ್ಗಳ ನೆರವಿನಿಂದ ವೆಸ್ಟ್ ಇಂಡೀಸ್ ಭಾರತವನ್ನು 24 ರನ್ಗಳಿಂದ ಸೋಲಿಸಿತು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿ 2-2ರಲ್ಲಿ ಸಮಬಲಗೊಂಡಿದೆ. ಅ.17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದನೇ ಹಾಗೂ ನಿರ್ಣಾಯಕ ಪಂದ್ಯ ನಡೆಯಲಿದೆ.
ತಿಲಕ್ ವಿಕೆಟ್ನಿಂದ ಬದಲಾದ ಪಂದ್ಯದ ದಿಕ್ಕು
248 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ 12ನೇ ಓವರ್ನಲ್ಲಿ 130 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಉತ್ತಮ ಜೊತೆಯಾಟವಾಡಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಇಬ್ಬರೂ ವೇಗವಾಗಿ ರನ್ ಗಳಿಸುವ ಮೂಲಕ ಕೊನೆಯ 19 ಎಸೆತಗಳಲ್ಲಿ 48 ರನ್ಗಳ ಅಗತ್ಯವಿರುವ ಸ್ಥಿತಿಗೆ ತಂಡವನ್ನು ತಲುಪಿಸಿದರು.
ಆದರೆ, ರೊಮಾರಿಯೊ ಶೆಫರ್ಡ್ ತಿಲಕ್ ವರ್ಮಾ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಇದು ಪಂದ್ಯದ ನಿರ್ಣಾಯಕ ತಿರುವಾಯಿತು ಎಂದು ಸ್ಯಾಮ್ಸನ್ ಅಭಿಪ್ರಾಯಪಟ್ಟರು.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಲಕ್ ವಿಕೆಟ್ ಪತನಗೊಳ್ಳುವವರೆಗೆ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಪ್ರತಿ ಓವರ್ಗೆ 10ರಿಂದ 12 ರನ್ಗಳ ವೇಗದಲ್ಲಿ ಬ್ಯಾಟಿಂಗ್ ನಡೆಯುತ್ತಿತ್ತು. ಒತ್ತಡದ ಪರಿಸ್ಥಿತಿಯಲ್ಲೂ ರೆಡ್ಡಿ ಮತ್ತು ತಿಲಕ್ ಅತ್ಯುತ್ತಮವಾಗಿ ಆಡುತ್ತಿದ್ದರು. ಆ ಹಂತದಲ್ಲಿ ಭಾರತ ಗುರಿ ತಲುಪುವ ಸ್ಥಿತಿಯಲ್ಲಿತ್ತು ಎಂದು ಹೇಳಿದರು.
ಐದು ವಿಕೆಟ್ ಕಳೆದುಕೊಂಡಿದ್ದರೂ ಪಂದ್ಯದಲ್ಲಿ ನಿಯಂತ್ರಣ ಕಾಯ್ದುಕೊಂಡಿದ್ದು ಉತ್ತಮ ಸಂಗತಿ. ಇಬ್ಬರು ಯುವ ಆಟಗಾರರು ಒತ್ತಡವನ್ನು ಸಮರ್ಥವಾಗಿ ಎದುರಿಸಿ ವೆಸ್ಟ್ ಇಂಡೀಸ್ ಬೌಲರ್ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವೈಯಕ್ತಿಕ ಆಟದ ಬಗ್ಗೆ ತೃಪ್ತಿ, ಸೋಲಿನ ಬಗ್ಗೆ ನಿರಾಸೆ
ಸ್ಯಾಮ್ಸನ್ ಈ ಪಂದ್ಯದಲ್ಲಿ 23 ಎಸೆತಗಳಲ್ಲಿ 56 ರನ್ ಗಳಿಸಿ ಭಾರತದ ಗುರಿ ಬೆನ್ನಟ್ಟುವಿಕೆಗೆ ಉತ್ತಮ ಆರಂಭ ಒದಗಿಸಿದ್ದರು. ಆದರೆ, ವೈಯಕ್ತಿಕ ಪ್ರದರ್ಶನ ಉತ್ತಮವಾಗಿದ್ದರೂ ತಂಡ ಸೋತಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದರು.
ಸೋಲನುಭವಿಸಿದ ತಂಡದ ಭಾಗವಾಗಿದ್ದಾಗ ವೈಯಕ್ತಿಕ ಪ್ರದರ್ಶನದ ಅನುಭವವೇ ಬೇರೆಯಾಗಿರುತ್ತದೆ. ತಾವು ಗೆದ್ದ ತಂಡದ ಭಾಗವಾಗಿರಲು ಬಯಸಿದ್ದೆ. ಮೈದಾನದಲ್ಲಿ ಬ್ಯಾಟಿಂಗ್ ಮಾಡುವುದನ್ನು ಆನಂದಿಸಿದ್ದರೂ ತಂಡ ಗೆಲ್ಲಬೇಕೆಂಬುದು ತಮ್ಮ ಬಯಕೆಯಾಗಿತ್ತು ಎಂದು ಸ್ಯಾಮ್ಸನ್ ತಿಳಿಸಿದರು.
ಬೃಹತ್ ಗುರಿ ಬೆನ್ನಟ್ಟುವಾಗ ಹೆಚ್ಚು ಯೋಚಿಸಲು ಸಮಯವಿರುವುದಿಲ್ಲ. ಸ್ವಾಭಾವಿಕ ಆಟದ ಮೇಲೆ ಹಾಗೂ ದೊಡ್ಡ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ತಾವು ಅದನ್ನೇ ಮಾಡಿದ್ದಾಗಿ ಅವರು ಹೇಳಿದರು.
ಹೈದರಾಬಾದ್ನಲ್ಲಿ ಜಯ ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ಐದು ಪಂದ್ಯಗಳ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ. ಇದೀಗ ಉಭಯ ತಂಡಗಳ ಗಮನ ಅ.17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಹಾಗೂ ನಿರ್ಣಾಯಕ ಪಂದ್ಯದೆಡೆಗೆ ನೆಟ್ಟಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.