ಅವಮಾನ ಪ್ರಕರಣದಲ್ಲಿ ಕ್ಷಮೆ ಕೋರಿಕೆ ಕಡ್ಡಾಯ, ಆರೋಪ ಒಪ್ಪಿಕೊಂಡಂತಲ್ಲ: ಗೃಹ ಸಚಿವಾಲಯ
ನವದೆಹಲಿ, 15 ಅಕ್ಟೋಬರ್ (ಹಿ.ಸ.): ನ್ಯಾಯಾಂಗ ನಿಂದನೆ ನೋಟಿಸ್‌ಗೆ ಉತ್ತರವಾಗಿ ಅಫಿಡವಿಟ್‌ನಲ್ಲಿ ಬೇಷರತ್ ಕ್ಷಮೆ ಕೋರುವುದು ಕಡ್ಡಾಯ ನ್ಯಾಯಾಲಯದ ಪ್ರಕ್ರಿಯೆಯಾಗಿದ್ದು, ಇದನ್ನು ಆರೋಪಗಳನ್ನು ಒಪ್ಪಿಕೊಂಡಂತೆ ಪರಿಗಣಿಸಬಾರದು ಎಂದು ಕೇಂದ್ರ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಅಕ್
गृह मंत्रालय Home Ministry


ನವದೆಹಲಿ, 15 ಅಕ್ಟೋಬರ್ (ಹಿ.ಸ.):

ನ್ಯಾಯಾಂಗ ನಿಂದನೆ ನೋಟಿಸ್‌ಗೆ ಉತ್ತರವಾಗಿ ಅಫಿಡವಿಟ್‌ನಲ್ಲಿ ಬೇಷರತ್ ಕ್ಷಮೆ ಕೋರುವುದು ಕಡ್ಡಾಯ ನ್ಯಾಯಾಲಯದ ಪ್ರಕ್ರಿಯೆಯಾಗಿದ್ದು, ಇದನ್ನು ಆರೋಪಗಳನ್ನು ಒಪ್ಪಿಕೊಂಡಂತೆ ಪರಿಗಣಿಸಬಾರದು ಎಂದು ಕೇಂದ್ರ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಅಕ್ಟೋಬರ್ 10ರಂದು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವುದು ಮತ್ತು ಸಾರಿಗೆ ನಿರ್ಬಂಧಗಳನ್ನು ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಗೃಹ ಕಾರ್ಯದರ್ಶಿ ಬೇಷರತ್ ಕ್ಷಮೆ ಕೋರಿದ್ದಾರೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ದೆಹಲಿ ಪೊಲೀಸ್ ಆಯುಕ್ತರು ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ತಮ್ಮ ಕ್ರಮಗಳು ಕಾನೂನುಬದ್ಧವಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿದ್ದವು. ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದ್ದವು ಎಂದು ಅವರು ಅಫಿಡವಿಟ್‌ಗಳಲ್ಲಿ ವಾದಿಸಿದ್ದಾರೆ.

ಕೆಲವು ಮಾಧ್ಯಮ ಸಂಸ್ಥೆಗಳು ಕೇಂದ್ರ ಗೃಹ ಕಾರ್ಯದರ್ಶಿ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಉತ್ತರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿದ್ದಾರೆ ಎಂದು ವರದಿ ಮಾಡಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾದಾಗ, ಅದಕ್ಕೆ ಉತ್ತರವಾಗಿ ಸಲ್ಲಿಸುವ ಅಫಿಡವಿಟ್‌ನ ಮೊದಲ ಭಾಗದಲ್ಲಿ ಬೇಷರತ್ ಕ್ಷಮೆ ಕೋರುವುದು ವಾಡಿಕೆಯ ಕಡ್ಡಾಯ ಪ್ರಕ್ರಿಯೆಯಾಗಿದೆ. ಅದರ ನಂತರವೇ ಪ್ರಕರಣಕ್ಕೆ ಸಂಬಂಧಿಸಿದ ಇತರ ವಾಸ್ತವಾಂಶಗಳು ಮತ್ತು ವಾದಗಳನ್ನು ಮಂಡಿಸಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಪ್ರಕ್ರಿಯೆಯಂತೆ ಗೃಹ ಕಾರ್ಯದರ್ಶಿ, ಪೊಲೀಸ್ ಆಯುಕ್ತರು ಮತ್ತು ಇತರ ಸಂಬಂಧಿತ ಅಧಿಕಾರಿಗಳು ಸಲ್ಲಿಸಿರುವ ಅಫಿಡವಿಟ್‌ಗಳ ಮೊದಲ ಪ್ಯಾರಾದಲ್ಲಿ ಈ ಷರತ್ತನ್ನು ಪಾಲಿಸಲಾಗಿದೆ. ನಂತರದ ಭಾಗಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿ ಮತ್ತು ವಾದಗಳನ್ನು ನೀಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande