ಜರ್ಮನಿಯಲ್ಲಿ ಕಟ್ಟಡಕ್ಕೆ ಬೆಂಕಿ: ಮೂವರು ಭಾರತೀಯರ ಸಾವು, ಓರ್ವನ ಬಂಧನ
ಬರ್ಲಿನ್, 15 ಅಕ್ಟೋಬರ್ (ಹಿ.ಸ.): ಜರ್ಮನಿಯ ಬೋಖುಮ್ ನಗರದ ಬಹುಮಹಡಿ ವಸತಿ ಕಟ್ಟಡದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬನನ್ನು ಪ
बिल्डिंग में लगी आग के बाद माैके पर माैजूद अधिकारी


ಬರ್ಲಿನ್, 15 ಅಕ್ಟೋಬರ್ (ಹಿ.ಸ.):

ಜರ್ಮನಿಯ ಬೋಖುಮ್ ನಗರದ ಬಹುಮಹಡಿ ವಸತಿ ಕಟ್ಟಡದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬನನ್ನು ಪ್ರಾಥಮಿಕವಾಗಿ ಬಂಧಿಸಿದ್ದಾರೆ. ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪೊಲೀಸರು, ಮೃತಪಟ್ಟವರಲ್ಲಿ 25 ಮತ್ತು 27 ವರ್ಷದ ಇಬ್ಬರು ಮಹಿಳೆಯರು ಹಾಗೂ 26 ವರ್ಷದ ಒಬ್ಬ ಪುರುಷ ಸೇರಿದ್ದಾರೆ. ಮೂವರೂ ಭಾರತೀಯ ಪ್ರಜೆಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.

ಟರ್ಕಿಯ ಸರ್ಕಾರಿ ಸುದ್ದಿಸಂಸ್ಥೆ ಅನಾಡೋಲು, ಜರ್ಮನಿಯ ಸಾರ್ವಜನಿಕ ಪ್ರಸಾರ ಸಂಸ್ಥೆ ಎನ್‌ಡಿಆರ್ ವರದಿಯನ್ನು ಉಲ್ಲೇಖಿಸಿ, ಘಟನೆಗೂ ಮುನ್ನ ವಸತಿ ಕಟ್ಟಡದಲ್ಲಿ ನಡೆದಿದ್ದ ವಿವಾದವೊಂದಕ್ಕೆ ಸಂಬಂಧಿಸಿದಂತೆ ಭಾನುವಾರ ಪೊಲೀಸರನ್ನು ಕರೆಸಲಾಗಿತ್ತು ಎಂದು ವರದಿ ಮಾಡಿದೆ. ಈ ವಸತಿ ಸಮುಚ್ಚಯದಲ್ಲಿ ಈ ಹಿಂದೆಯೂ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಭೇಟಿ ನೀಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಗ್ನಿ ಅವಘಡದ ಕಾರಣ ಪತ್ತೆಹಚ್ಚಲು ಅಗ್ನಿಶಾಮಕ ತಜ್ಞರನ್ನೂ ಒಳಗೊಂಡಂತೆ ಸಮಗ್ರ ತನಿಖೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಬಳಿಕ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ವ್ಯಕ್ತಿಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.

ಕೊಲೆ ಪ್ರಕರಣಗಳ ತನಿಖೆ ನಡೆಸುವ ವಿಶೇಷ ಪೊಲೀಸ್ ತಂಡವು ಬಂಧಿತ ವ್ಯಕ್ತಿಯನ್ನು ವಿಚಾರಣೆ ನಡೆಸಿದೆ. ಬೋಖುಮ್ ಅಭಿಯೋಜಕರ ಕಚೇರಿಯ ನಿರ್ದೇಶನದಂತೆ ಮುಂದಿನ ತನಿಖೆ ನಡೆಯುತ್ತಿದೆ.

ಆದರೆ, ಕಟ್ಟಡದಲ್ಲಿ ಈ ಹಿಂದೆ ನಡೆದಿದ್ದ ಘಟನೆಗಳಿಗೂ ಮಂಗಳವಾರದ ಅಗ್ನಿ ಅವಘಡಕ್ಕೂ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೂವರು ಭಾರತೀಯರ ಸಾವಿಗೆ ಕಾರಣವಾದ ಬೆಂಕಿ ಅವಘಡದ ಸಂದರ್ಭಗಳು ಹಾಗೂ ಬಂಧಿತ ವ್ಯಕ್ತಿಯ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande