
ತುಮಕೂರು, 15 ಅಕ್ಟೋಬರ್ (ಹಿ.ಸ.):
ಚಿಕ್ಕನಾಯಕನಹಳ್ಳಿ ತಾಲೂಕಿನ ಪುರಸಭೆ ವ್ಯಾಪ್ತಿಯ 6ನೇ ವಾರ್ಡಿನ ಕೇದಿಗೆಹಳ್ಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರು ಭೇಟಿ ನೀಡಿ, ಸ್ಥಳೀಯರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕೊರತೆ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರಿನ ಪೂರೈಕೆಯಲ್ಲಿನ ತೊಂದರೆಗಳು ಹಾಗೂ ಇತರ ಸಾರ್ವಜನಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ನಿವಾಸಿಗಳ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಸ್ವರೂಪ ಮತ್ತು ಅವುಗಳಿಗೆ ಕಾರಣವಾಗಿರುವ ಅಂಶಗಳ ಬಗ್ಗೆ ಚರ್ಚಿಸಿದರು.
ಕೇದಿಗೆಹಳ್ಳಿ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸಿ, ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ಇಂದೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.