ಆಸ್ತಿ ವಿವಾದ: 15 ವರ್ಷದ ಅಣ್ಣನ ಮಗನ ಕೊಲೆ; ಠಾಣೆಗೆ ತೆರಳಿ ಶರಣಾದ ಚಿಕ್ಕಪ್ಪ
ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಒಂದು ಎಕರೆ ಜಮೀನು ವಿವಾದದ ಹಿನ್ನೆಲೆಯಲ್ಲಿ 15 ವರ್ಷದ ಅಣ್ಣನ ಮಗ ಕೃಷ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪದ ಮೇಲೆ ಚಿಕ್ಕಪ್ಪ ಮೋಹನ್ ಬಂಧನಕ್ಕೊಳಗಾಗಿದ್ದಾನೆ. ಕೃತ್ಯದ ಬಳಿಕ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
uncle-kills-15-year-old-nephew-over-property-dispute-in-bengaluru-surrenders


ಬೆಂಗಳೂರು, 14 ಅಕ್ಟೋಬರ್ (ಹಿ.ಸ.):

ಆಸ್ತಿ ವಿವಾದದ ಹಿನ್ನೆಲೆಯಲ್ಲಿ 15 ವರ್ಷದ ಬಾಲಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪದ ಮೇಲೆ ಆತನ ಚಿಕ್ಕಪ್ಪನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಮಾಡಿದ ಬಳಿಕ ಆರೋಪಿ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅಣ್ಣನ ಮಗನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಮೋಹನ್ ಬಂಧಿತನಾಗಿದ್ದು, ಕೃಷ್ಣ (15) ಕೊಲೆಯಾದ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಎಕರೆ ಜಮೀನು ವಿವಾದವೇ ಕೊಲೆಗೆ ಕಾರಣ

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಸಮೀಪ ಮೃತ ಬಾಲಕನ ತಂದೆ ಮುನಿರಾಜು ಅವರಿಗೆ ಸುಮಾರು ಒಂದು ಎಕರೆ ಪಿತ್ರಾರ್ಜಿತ ಜಮೀನು ಇತ್ತು. ಆರೋಪಿಯಾದ ಮೋಹನ್, ತನ್ನ ಅಕ್ಕ ಪುಷ್ಪ ಹಾಗೂ ಅಣ್ಣನ ಮಕ್ಕಳಾದ ಯಶವಂತ ಮತ್ತು ಕೃಷ್ಣ ಅವರಿಗೆ ತಿಳಿಯದಂತೆ ಸಹಿಗಳನ್ನು ನಕಲು ಮಾಡಿ ಕಳೆದ ವರ್ಷ ಜಮೀನನ್ನು ಯಲಹಂಕದ ಜಿ.ಕೆ. ಬಿಲ್ಡರ್ಸ್ಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.

ಈ ಸಂಬಂಧ ಪುಷ್ಪ ಅವರು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಸಹಿ ನಕಲು ಮಾಡಿರುವ ವಿಚಾರ ಬಿಲ್ಡರ್ಸ್ಗೆ ತಿಳಿದುಬಂದಿದ್ದು, ಪುಷ್ಪ ಹಾಗೂ ಮುನಿರಾಜು ಅವರ ಮಕ್ಕಳಾದ ಯಶವಂತ ಮತ್ತು ಕೃಷ್ಣ ಅವರ ಖಾತೆಗಳಿಗೆ ಹಣ ವರ್ಗಾಯಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಮೋಹನ್, ಆಗಾಗ್ಗೆ ಮನೆಗೆ ಬಂದು ಯಶವಂತ ಮತ್ತು ಕೃಷ್ಣ ಅವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಮಲಗಿದ್ದ ಬಾಲಕನ ಮೇಲೆ ಮಚ್ಚಿನಿಂದ ಹಲ್ಲೆ

ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಕೃಷ್ಣನ ಮನೆಗೆ ಬಂದ ಆರೋಪಿ ಮೋಹನ್, ಬಾಲಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯಿಂದ ಬಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕೃಷ್ಣನ ತಾಯಿ ಸುಮಾರು 14 ವರ್ಷಗಳ ಹಿಂದೆಯೇ ಪತಿ ಮತ್ತು ಮಕ್ಕಳನ್ನು ತೊರೆದಿದ್ದರು. ಬಳಿಕ ತಂದೆ ಮುನಿರಾಜು ಕೂಡ ಮೃತಪಟ್ಟಿದ್ದರು. ಹೀಗಾಗಿ ಕೃಷ್ಣ ಮತ್ತು ಆತನ ಅಣ್ಣ ಯಶವಂತ ಇಬ್ಬರೂ ಮನೆಯಲ್ಲಿ ವಾಸಿಸುತ್ತಿದ್ದರು. ಯಶವಂತ ಕೂಲಿ ಕೆಲಸ ಮಾಡುತ್ತಿದ್ದರೆ, ಕೃಷ್ಣ ಐವರಕಂಡಪುರದ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿನಿಮಾ ನೋಡಲು ಹೋಗಿದ್ದ ಅಣ್ಣನ ಜೀವ ಉಳಿಸಿದ ಅದೃಷ್ಟ

ಕೃತ್ಯ ನಡೆದ ಸಂದರ್ಭದಲ್ಲಿ ಕೃಷ್ಣನ ಅಣ್ಣ ಯಶವಂತ ಸಿನಿಮಾ ನೋಡಲು ತೆರಳಿದ್ದ ಎನ್ನಲಾಗಿದೆ. ಹೀಗಾಗಿ ಆತ ಹತ್ಯೆಯಿಂದ ಪಾರಾಗಿದ್ದಾನೆ. ಆಸ್ತಿಗಾಗಿ ನಡೆದಿದ್ದ ಕುಟುಂಬದ ಕಲಹ ಬಾಲಕನ ಕೊಲೆಯಲ್ಲಿ ಅಂತ್ಯಗೊಂಡಿದೆ.

ಪೊಲೀಸ್ ಠಾಣೆಗೆ ತೆರಳಿ ಶರಣು

ಕೊಲೆ ಮಾಡಿದ ಬಳಿಕ ಆರೋಪಿ ಮೋಹನ್ ಮಂಗಳವಾರ ಬೆಳಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಕೃಷ್ಣನನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಶರಣಾಗಿದ್ದಾನೆ. ವಿಶ್ವನಾಥಪುರ ಪೊಲೀಸರು ಕೂಡಲೇ ಸೋಲದೇವನಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಕೋಣೆಯಲ್ಲಿ ಬಾಲಕನ ಮೃತದೇಹ ಪತ್ತೆಹಚ್ಚಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande