ಕಬ್ಬು ಬೆಳೆಗಾರರ ಸಮಸ್ಯೆ ಅಧ್ಯಯನಕ್ಕೆ ಕೇಂದ್ರದಿಂದ ಜಂಟಿ ಸಮಿತಿ ರಚನೆ
ನವದೆಹಲಿ, 14 ಅಕ್ಟೋಬರ್ (ಹಿ.ಸ.): ಕಬ್ಬು ಬೆಳೆಗಾರರ ಸಮಸ್ಯೆಗಳ ಸಮಗ್ರ ಅಧ್ಯಯನ ನಡೆಸಿ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರ ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಜಂಟಿ ಸಮಿತಿ ರಚಿಸಿದೆ. ದೆಹಲಿಯಲ್ಲಿ ಕಬ್ಬು ಬೆಳೆಗಾರರ ನಿಯೋಗದೊಂದಿಗೆ ನಡೆದ ಉನ್ನತ ಮಟ್ಟ
ಕಬ್ಬು ಬೆಳೆಗಾರರ ಸಮಸ್ಯೆ ಅಧ್ಯಯನಕ್ಕೆ ಕೇಂದ್ರದಿಂದ ಜಂಟಿ ಸಮಿತಿ ರಚನೆ


ನವದೆಹಲಿ, 14 ಅಕ್ಟೋಬರ್ (ಹಿ.ಸ.):

ಕಬ್ಬು ಬೆಳೆಗಾರರ ಸಮಸ್ಯೆಗಳ ಸಮಗ್ರ ಅಧ್ಯಯನ ನಡೆಸಿ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರ ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಜಂಟಿ ಸಮಿತಿ ರಚಿಸಿದೆ. ದೆಹಲಿಯಲ್ಲಿ ಕಬ್ಬು ಬೆಳೆಗಾರರ ನಿಯೋಗದೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಎರಡು ದಿನಗಳಲ್ಲೇ ಕೇಂದ್ರ ಸರ್ಕಾರ ಸಮಿತಿ ರಚಿಸಿ ಕ್ರಮ ಕೈಗೊಂಡಿದೆ ಎಂದು‌ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ನಡೆದ ಸಭೆಯಲ್ಲಿ ರೈತರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿದ್ದ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನೀಡಿದ್ದ ಭರವಸೆಯಂತೆ ಸಮಿತಿ ರಚಿಸಲಾಗಿದೆ. ರೈತ ಪ್ರಮುಖರು, ಕೃಷಿ ವಿಜ್ಞಾನಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಸಮಿತಿಯು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಲಿದೆ.

ಪ್ರೊ. ರಮೇಶ್ ಚಂದ್ ಅಧ್ಯಕ್ಷತೆ

ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕೇಂದ್ರ ಕೃಷಿ ಆಯುಕ್ತರು, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸಕ್ಕರೆ ವಿಭಾಗದ ಜಂಟಿ ಕಾರ್ಯದರ್ಶಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾನೂನು ಮಾಪನಶಾಸ್ತ್ರ ವಿಭಾಗದ ಜಂಟಿ ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿದ್ದಾರೆ.

ಸಮಿತಿಯು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ರೈತರ ಆತಂಕ ನಿವಾರಣೆ ಹಾಗೂ ಬೇಡಿಕೆಗಳ ಈಡೇರಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ.

ಕರ್ನಾಟಕದಲ್ಲೂ ರಾಜ್ಯ ಸಲಹಾ ಬೆಲೆಯ ಸಾಧ್ಯತೆ ಪರಿಶೀಲನೆ

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ರಾಜ್ಯ ಸಲಹಾ ಬೆಲೆ ನಿಗದಿಪಡಿಸುವಂತೆ ರೈತರು ಮಾಡಿರುವ ಬೇಡಿಕೆಯನ್ನೂ ಸಮಿತಿ ಪರಿಶೀಲಿಸಲಿದೆ. ಇತರೆ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಬೆಲೆ ನಿಗದಿ ಪದ್ಧತಿಗಳ ಆಧಾರದಲ್ಲಿ ಕರ್ನಾಟಕದಲ್ಲೂ ರಾಜ್ಯ ಸಲಹಾ ಬೆಲೆ ಜಾರಿಗೆ ತರುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರನ್ನು ನೇರವಾಗಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲು ಸಮಿತಿ ಉದ್ದೇಶಿಸಿದೆ. ಕಬ್ಬು ಬೆಳೆಯುವ ಇತರೆ ರಾಜ್ಯಗಳಲ್ಲಿನ ಬೆಲೆ ನಿಗದಿ ವ್ಯವಸ್ಥೆ, ರೈತರಿಗೆ ರಾಜ್ಯ ಸರ್ಕಾರಗಳು ನೀಡುತ್ತಿರುವ ಬೆಂಬಲ ಹಾಗೂ ಸ್ಥಳೀಯ ಪರಿಸ್ಥಿತಿಗಳನ್ನೂ ಪರಿಶೀಲಿಸಲಿದೆ. ರೈತರು, ಸಕ್ಕರೆ ಕಾರ್ಖಾನೆಗಳ ಸಂಘಗಳು, ರಾಜ್ಯ ಸರ್ಕಾರಗಳು, ತಜ್ಞರು ಮತ್ತು ಸಂಬಂಧಿತ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

ಸಕ್ಕರೆ ಮಾರಾಟ ಬೆಲೆ ಪರಿಷ್ಕರಣೆಗೂ ಪರಿಶೀಲನೆ

ಕೃಷಿ ವೆಚ್ಚ ಮತ್ತು ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಿ ಕಬ್ಬು ಬೆಳೆಗಾರರಿಗೆ ಲಾಭದಾಯಕ ಆದಾಯ ದೊರೆಯುವಂತೆ ಮಾಡುವ ಕುರಿತು ಸಮಿತಿ ಅಧ್ಯಯನ ನಡೆಸಲಿದೆ. ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯಿಂದ ದೊರೆಯುವ ಆದಾಯ ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಕ್ಕರೆಯ ಕಾರ್ಖಾನೆ ನಿರ್ಗಮನ ಕನಿಷ್ಠ ಮಾರಾಟ ಬೆಲೆ ಪರಿಷ್ಕರಿಸಬೇಕೆಂಬ ರೈತರ ಬೇಡಿಕೆಯನ್ನೂ ಪರಿಶೀಲಿಸಲಿದೆ.

ಕಬ್ಬಿನಲ್ಲಿರುವ ಸಕ್ಕರೆ ಅಂಶ ಮತ್ತು ಇಳುವರಿ ಪರೀಕ್ಷೆಯ ಪ್ರಸ್ತುತ ವಿಧಾನಗಳು, ಇಳುವರಿ ವರದಿಯ ಪಾರದರ್ಶಕತೆ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವ ಪದ್ಧತಿ, ತೂಕದ ಅಳತೆಗಳ ಹೊಂದಾಣಿಕೆ ಹಾಗೂ ತಪಾಸಣಾ ವ್ಯವಸ್ಥೆಗಳ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ.

ಯಾಂತ್ರೀಕೃತ ವಿಧಾನದಲ್ಲಿ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಕಡಿತಗೊಳಿಸುವ ಪ್ರಸ್ತುತ ಪದ್ಧತಿ ಮತ್ತು ಯಾಂತ್ರೀಕೃತ ಕಟಾವಿನಿಂದ ಉಂಟಾಗುವ ನೈಜ ನಷ್ಟದ ಪ್ರಮಾಣವನ್ನೂ ಅಧ್ಯಯನ ಮಾಡಲಿದೆ. ಈ ಅಂಶಗಳು ರೈತರಿಗೆ ಪಾವತಿಸಬೇಕಾದ ಬೆಲೆ ಹಾಗೂ ಅವರ ಆರ್ಥಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮವನ್ನು ಮೌಲ್ಯಮಾಪನ ಮಾಡಲಿದೆ. ಅಗತ್ಯವೆಂದು ಕಂಡುಬರುವ ಇತರ ಸಂಬಂಧಿತ ವಿಷಯಗಳನ್ನೂ ಪರಿಶೀಲನೆಗೆ ಒಳಪಡಿಸಲಿದೆ.

ಕೃಷಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಧ್ಯಕ್ಷರು

ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರೊ. ರಮೇಶ್ ಚಂದ್ ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞರು ಮತ್ತು ಸಾರ್ವಜನಿಕ ನೀತಿ ತಜ್ಞರಾಗಿದ್ದಾರೆ. ಅವರು 2015ರಿಂದ 2026ರವರೆಗೆ ನೀತಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರ ಮತ್ತು ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಹಾಗೂ 15ನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕೃಷಿ ಅಭಿವೃದ್ಧಿ, ರೈತರ ಸಮಸ್ಯೆಗಳು, ಆಹಾರ ಭದ್ರತೆ, ಕೃಷಿ ಮಾರುಕಟ್ಟೆ ಮತ್ತು ಬೆಲೆ ನೀತಿಯಲ್ಲಿ ಪರಿಣತಿ ಹೊಂದಿರುವ ಅವರ ನೇತೃತ್ವದಲ್ಲಿ ಸಮಿತಿಯು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಿ, ಕೇಂದ್ರ ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಸಲ್ಲಿಸಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande