
ನವದೆಹಲಿ, 14 ಅಕ್ಟೋಬರ್ (ಹಿ.ಸ.):
ದೆಹಲಿಯ ಜಂತರ್ ಮಂತರ್ನಲ್ಲಿ ಅನಧಿಕೃತವಾಗಿ ಪ್ರವೇಶಿಸಿದ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) 14 ಸದಸ್ಯರ ವಿರುದ್ಧ ಪೊಲೀಸರು ಎರಡು ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿದ ಮರುದಿನವಾದ ಅಕ್ಟೋಬರ್ 13ರಂದು ಈ ಘಟನೆ ನಡೆದಿದೆ. ಪ್ರತಿಭಟನೆಗಾಗಿ ಸ್ಥಳಕ್ಕೆ ಆಗಮಿಸಿದ್ದ ಪಕ್ಷದ ಸದಸ್ಯರನ್ನು ಕರ್ತವ್ಯದಲ್ಲಿದ್ದ ಪೊಲೀಸರು ತಡೆಯಲು ಪ್ರಯತ್ನಿಸಿದರು. ಆದರೆ, ಕಾರ್ಯಕರ್ತರು ಖಾಸಗಿ ಆವರಣದ ಮಾರ್ಗವಾಗಿ ಒಳಪ್ರವೇಶಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ 14 ಸದಸ್ಯರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ ಜಿಲ್ಲೆಯ ಉಪ ಪೊಲೀಸ್ ಆಯುಕ್ತ ಸಚಿನ್ ಶರ್ಮಾ ಅವರ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪ್ರಥಮ ಮಾಹಿತಿ ವರದಿಯನ್ನು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ 289/26 ಸಂಖ್ಯೆಯಡಿ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 223(ಎ), 332 ಮತ್ತು 61(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎರಡನೇ ಪ್ರಕರಣವನ್ನು ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ 128/26 ಸಂಖ್ಯೆಯಡಿ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 221, 115(2), 132, 121(1) ಮತ್ತು 3(5)ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಮೂವರು ಪ್ರಮುಖ ಸದಸ್ಯರ ವಿರುದ್ಧ ಮುನ್ನೆಚ್ಚರಿಕೆ ಕ್ರಮ
ಪಕ್ಷದ ಪ್ರಮುಖ ಸದಸ್ಯರಾದ ಆಶುತೋಷ್ ರಾಂಕಾ, ಸೌರವ್ ದಾಸ್ ಮತ್ತು ಅಜಿಂಕ್ಯ ಶಿಂಧೆ ವಿರುದ್ಧ ಪೊಲೀಸರು ಪ್ರತ್ಯೇಕವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಇವರ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಮೂವರು ಸಾಮಾಜಿಕ ಜಾಲತಾಣಗಳ ಮೂಲಕ ಇತರರನ್ನೂ ಇದೇ ರೀತಿಯ ಚಟುವಟಿಕೆಗಳಿಗೆ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನೂ ಪೊಲೀಸರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ಗಳಾದ 126 ಮತ್ತು 170ರ ಅಡಿಯಲ್ಲಿ ಕ್ರಮ ಆರಂಭಿಸಿ, ಮೂವರನ್ನು ಬಂಧಿಸಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯ ಮುಂದೆ ಹಾಜರುಪಡಿಸಲಾಯಿತು.
ಬಿಡುಗಡೆ ಮಾಡಿದರೆ ಮತ್ತೆ ಕಾನೂನು ಉಲ್ಲಂಘಿಸುವ ಸಾಧ್ಯತೆಯಿದೆ ಹಾಗೂ ಇತರರನ್ನೂ ಅದಕ್ಕೆ ಪ್ರಚೋದಿಸಬಹುದು ಎಂಬ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದರು.
ಇಬ್ಬರಿಗೆ ನ್ಯಾಯಾಂಗ ಬಂಧನ
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು.
ಮತ್ತೊಬ್ಬ ಸದಸ್ಯ ಅಜಿಂಕ್ಯ ಶಿಂಧೆಗೆ ಆರು ತಿಂಗಳ ಕಾಲ ಶಾಂತಿ ಮತ್ತು ಸದ್ವತರಣೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಯಿತು. ಇದಕ್ಕಾಗಿ ಐದು ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಜಾಮೀನು ಬಾಂಡ್ ಸಲ್ಲಿಸುವಂತೆ ನಿರ್ದೇಶಿಸಲಾಯಿತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.