
ನವದೆಹಲಿ, 13 ಅಕ್ಟೋಬರ್ (ಹಿ.ಸ.):
ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ರೈತರನ್ನು ದೆಹಲಿಗೆ ಕರೆಸಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸಭೆಯಲ್ಲಿ ರೈತರ ಅಹವಾಲುಗಳನ್ನು ಸುದೀರ್ಘವಾಗಿ ಆಲಿಸಲಾಗಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರದಲ್ಲೇ ಜಂಟಿ ಸಮಿತಿ ರಚಿಸಲಾಗುವುದು. ಹೀಗಾಗಿ ರೈತರು ರಸ್ತೆ ತಡೆ ಸೇರಿದಂತೆ ಪ್ರತಿಭಟನೆಗಳನ್ನು ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದ್ದು, ಎಲ್ಲ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ರೈತರು ಉದ್ವೇಗಕ್ಕೆ ಒಳಗಾಗದೆ ಸರ್ಕಾರದ ಕ್ರಮಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಒಂದೆರಡು ದಿನಗಳಲ್ಲಿ ಅಥವಾ ಒಂದೆರಡು ಸಚಿವಾಲಯಗಳ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಹಲವು ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಂಟಿ ಸಮಿತಿಯಿಂದ ಸಮಸ್ಯೆಗಳ ಅಧ್ಯಯನ
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕೇಂದ್ರದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರಗಳ ಮೂವರು ಸಚಿವರು ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರೈತರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಕಬ್ಬು ಬೆಳೆಗಾರರು, ಕೃಷಿ ವಿಜ್ಞಾನಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು. ಸಮಿತಿಯು ರೈತರ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಸಲಹೆಗಳನ್ನು ನೀಡಲಿದೆ ಎಂದು ಜೋಶಿ ಹೇಳಿದರು.
ದೆಹಲಿ ಸಭೆ ವಿಫಲವಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಸಭೆ ಫಲಪ್ರದವಾಗಿದ್ದು, ಜಂಟಿ ಸಮಿತಿ ರಚಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ರೈತ ನಾಯಕ ರಾಜು ಶೆಟ್ಟಿ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೀಡಿದ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚೆ
ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಕಡಿಮೆಯಿದೆ ಎಂಬ ರೈತರ ಆಕ್ಷೇಪ, ಕನಿಷ್ಠ ಬೆಂಬಲ ಬೆಲೆ, ಕಬ್ಬಿನ ತೂಕದಲ್ಲಿನ ವ್ಯತ್ಯಾಸ, ಕಟಾವಿನ ಬಳಿಕ ಸಕ್ಕರೆ ಕಾರ್ಖಾನೆಗಳು ಶೇ.9ರಷ್ಟು ನಷ್ಟದ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದು ಹಾಗೂ ವಾಣಿಜ್ಯ ಉದ್ದೇಶದ ಕಬ್ಬಿಗೆ ಪ್ರತ್ಯೇಕ ದರ ನಿಗದಿಪಡಿಸುವ ಬೇಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಹಕಾರ ಪಡೆಯಲಾಗುವುದು. ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ರಾಜ್ಯ ಸಲಹಾ ದರ ಜಾರಿಗೆ ಸಲಹೆ
ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕರ್ನಾಟಕದಲ್ಲೂ ರಾಜ್ಯ ಸಲಹಾ ದರ (ಎಸ್‌ಎಪಿ) ಜಾರಿಗೆ ತರುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಜೋಶಿ ತಿಳಿಸಿದರು.
ತಮಿಳುನಾಡು, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಈಗಾಗಲೇ ರಾಜ್ಯ ಸಲಹಾ ದರ ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಬ್ಬು ಬೆಳೆಗಾರರ ಹಿತ ಕಾಪಾಡಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಇದರ ಜತೆಗೆ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣ, ಶೇ.9ರಷ್ಟು ನಷ್ಟದ ಕಡಿತ ಹಾಗೂ ತೂಕದಲ್ಲಿನ ವ್ಯತ್ಯಾಸದ ಕುರಿತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ರೈತರು ಪ್ರತಿಭಟನೆ ಅಥವಾ ರಸ್ತೆ ತಡೆ ನಡೆಸುವ ಬದಲು ಮಾತುಕತೆ ಮತ್ತು ಸಹಕಾರಕ್ಕೆ ಆದ್ಯತೆ ನೀಡಬೇಕು ಎಂದು ಅವರು ಪುನರುಚ್ಚರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.