
ಬೆಂಗಳೂರು, 13 ಅಕ್ಟೋಬರ್ (ಹಿ.ಸ.):
ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭದ್ರತಾ ಸಿಬ್ಬಂದಿ ತಳ್ಳಿದ ಘಟನೆ ಜನಸಂದಣಿಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.
ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆಗಳು ಹಾಗೂ ಬೃಹತ್ ಜನಸಮೂಹ ಸೇರುವ ಸಂದರ್ಭಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಹಿಂದೆ ತಾವೂ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದಾಗ ಇಂತಹ ಅನುಭವಗಳನ್ನು ಎದುರಿಸಿದ್ದಾಗಿ ಹೇಳಿದರು.
ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಸುಲಭವಲ್ಲ. ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವುದು ಅಲ್ಲಿನ ಭದ್ರತಾ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದೆ. ಅವರ ಬಳಿ ಯಾರೂ ಸುಲಭವಾಗಿ ತೆರಳದಂತೆ ನೋಡಿಕೊಳ್ಳುವುದು ಭದ್ರತಾ ನಿಯಮಗಳ ಭಾಗವಾಗಿದೆ ಎಂದು ವಿವರಿಸಿದರು.
ದುರದೃಷ್ಟವಶಾತ್ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಅಲ್ಲಿಗೆ ತೆರಳಿದ್ದರು. ಜನಸಂದಣಿಯ ನಡುವೆ ಅವರನ್ನು ಸ್ವಲ್ಪ ತಳ್ಳಲಾಗಿದೆ ಎಂದು ಪರಮೇಶ್ವರ ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಶಿಷ್ಟಾಚಾರವಿದ್ದರೂ ಭದ್ರತೆಯ ದೃಷ್ಟಿಯಿಂದ ಇಂತಹ ಸಂದರ್ಭಗಳಲ್ಲಿ ಸಿಬ್ಬಂದಿ ಮುಖ್ಯಮಂತ್ರಿಗಳಾಗಲಿ ಅಥವಾ ಇತರ ಗಣ್ಯರಾಗಲಿ ಎಂಬುದನ್ನು ನೋಡದೆ, ತಮಗೆ ವಹಿಸಲಾದ ವ್ಯಕ್ತಿಯ ಭದ್ರತೆಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.