
ಬೆಂಗಳೂರು, 13 ಅಕ್ಟೋಬರ್ (ಹಿ.ಸ.):
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಸ್. ರವಿ ಅವರು ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ನಿವೃತ್ತಿಗೆ ಇನ್ನು ಕೇವಲ ಆರು ತಿಂಗಳು ಬಾಕಿ ಇರುವಾಗಲೇ ಅವರು ಈ ನಿರ್ಧಾರ ಕೈಗೊಂಡಿರುವುದು ಪೊಲೀಸ್ ವಲಯದಲ್ಲಿ ಕುತೂಹಲ ಮೂಡಿಸಿದೆ.
1998ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಎಸ್. ರವಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ (ಡಿಜಿ-ಐಜಿಪಿ) ಕಚೇರಿಗೆ ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಡಿಜಿ-ಐಜಿಪಿ ಎಂ.ಎ. ಸಲೀಂ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಎಸ್. ರವಿ ಅವರು ಈ ಹಿಂದೆ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅವರನ್ನು ಕೆಎಸ್ಆರ್ಪಿಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಸೇವಾವಧಿ ಮುಕ್ತಾಯಕ್ಕೆ ಕೇವಲ ಆರು ತಿಂಗಳು ಬಾಕಿ ಇರುವಾಗಲೇ ಅವರು ಸ್ವಯಂ ನಿವೃತ್ತಿಗೆ ಮುಂದಾಗಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಎಸ್. ರವಿ ಅವರ ನಿರ್ಧಾರದ ಹಿಂದೆ ವೈಯಕ್ತಿಕ ಕಾರಣಗಳಿವೆಯೇ ಅಥವಾ ಇಲಾಖೆಯೊಳಗಿನ ಬೆಳವಣಿಗೆಗಳು ಕಾರಣವಾಗಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕೆಲವು ಮೂಲಗಳ ಪ್ರಕಾರ, ಹಿರಿಯ ಅಧಿಕಾರಿಯೊಂದಿಗಿನ ಮನಸ್ತಾಪ ಹಾಗೂ ಕಿರುಕುಳದ ಆರೋಪಗಳು ಅವರ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಲಭ್ಯವಾಗಿಲ್ಲ.
ರಾಜೀನಾಮೆ ಅಥವಾ ಸ್ವಯಂ ನಿವೃತ್ತಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಯಾಗಿರುವುದು ದೃಢಪಟ್ಟಿದ್ದರೂ, ಅದರ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೇವಾವಧಿ ಪೂರ್ಣಗೊಳ್ಳುವ ಮೊದಲೇ ಸ್ವಯಂ ನಿವೃತ್ತಿಗೆ ಮುಂದಾಗಿರುವುದು ಪೊಲೀಸ್ ಇಲಾಖೆಯ ಆಡಳಿತಾತ್ಮಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R