
ಬೆಂಗಳೂರು, 13 ಅಕ್ಟೋಬರ್ (ಹಿ.ಸ.):
ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಮನವಿಗೆ ಸ್ಪಂದಿಸಿ ಕರ್ನಾಟಕದ ಜಲಾಶಯಗಳಿಂದ ಆ ರಾಜ್ಯಕ್ಕೆ ನೀರು ಹರಿಸುವ ಮೂಲಕ ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅವರು, ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಸಚಿವರ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೃಷ್ಣಾ ನದಿ ನೀರು ಹರಿಸುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಿ, ಅಲ್ಲಿಂದ ತೆಲಂಗಾಣಕ್ಕೆ ನೀರು ಒದಗಿಸುತ್ತಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿಯಿಂದ ಕೇವಲ ಮೌಖಿಕ ಸೂಚನೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀರು ಹರಿಸುವ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿರುವ ಅಶೋಕ, ತೆಲಂಗಾಣದ ಸಚಿವರ ನಿಯೋಗ ಕಳೆದ ತಿಂಗಳು ಕರ್ನಾಟಕಕ್ಕೆ ಭೇಟಿ ನೀಡಿ ಒಂದು ತಿಂಗಳ ಕಾಲ 5,000 ಕ್ಯೂಸೆಕ್ ನೀರು ಹರಿಸುವಂತೆ ಮನವಿ ಮಾಡಿತ್ತು. ಅದರಂತೆ ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ಪ್ರತಿದಿನ 2,500ರಿಂದ 5,000 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಅಲ್ಲಿಂದ ತೆಲಂಗಾಣಕ್ಕೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ರೈತರ ಸಂಕಷ್ಟವನ್ನು ಹೆಲಿಕಾಪ್ಟರ್‌ನಲ್ಲಿ ವೀಕ್ಷಿಸಿ ತಲಾ 2,500 ರೂ. ಪರಿಹಾರ ನೀಡಿದ ಸರ್ಕಾರಕ್ಕೆ ತೆಲಂಗಾಣದ ಬರ ಪರಿಸ್ಥಿತಿಯ ಬಗ್ಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ಆದರೆ, ತನ್ನದೇ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ನೀರು ಹರಿಸಲು ಆದೇಶ ಇದೆಯೇ?
ತೆಲಂಗಾಣಕ್ಕೆ ಯಾವ ಆಧಾರದ ಮೇಲೆ ನೀರು ಹರಿಸಲಾಗುತ್ತಿದೆ? ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆಯೇ? ಕಾವೇರಿ ನದಿಯಿಂದಲೂ ಮುಖ್ಯಮಂತ್ರಿಗಳ ಮೌಖಿಕ ಸೂಚನೆಯ ಮೇರೆಗೆ ತಮಿಳುನಾಡಿಗೆ ನೀರು ಹರಿಸಲಾಗಿದೆಯೇ ಎಂದು ಅಶೋಕ ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದವರು ಅಥವಾ ರಾಜಕೀಯ ಪಾಲುದಾರರು ಆಡಳಿತ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಬೇರೆ ರಾಜ್ಯಗಳಿಗೆ ನೀರು ಹರಿಸುತ್ತಿರುವ ಸರ್ಕಾರ, ಕರ್ನಾಟಕದ ರೈತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸುವ ಇಂತಹ ಕ್ರಮಗಳನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ಸರ್ಕಾರ ತಕ್ಷಣವೇ ತೆಲಂಗಾಣಕ್ಕೆ ನೀರು ಹರಿಸುವುದನ್ನು ನಿಲ್ಲಿಸಿ, ರಾಜ್ಯದ ರೈತರು ಮತ್ತು ಜನರ ಅಗತ್ಯಗಳಿಗಾಗಿ ನೀರನ್ನು ಉಳಿಸಬೇಕು ಎಂದು ಆರ್. ಅಶೋಕ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.