
ಕೋಲಾರ, 12 ಅಕ್ಟೊಬರ್ (ಹಿ.ಸ) : ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ, ಮೂಢನಂಬಿಕೆ ಹಾಗೂ ಶೋಷಣೆಗಳನ್ನು ನಿವಾರಿಸಿ ಸರ್ವರಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯುವ ಸಮಾಜ ನಿರ್ಮಿಸುವ ಮಹತ್ವಾಕಾಂಕ್ಷೆಯಿAದ ರೂಪುಗೊಂಡ ಸಾಹಿತ್ಯವೇ ಶರಣ ಸಾಹಿತ್ಯ ಎಂದು ಶ್ರೀ ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಕೋಲಾರದಲ್ಲಿ ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವನ್ನು ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಹಾಗೂ ನೂತನವಾಗಿ ಅಸ್ಥಿತ್ವಕ್ಕೆ ತರಲಾಗಿರುವ ಜಿ.ಶ.ಸಾ.ಪ.ಸಾಮಾಜಿಕ ಜಾಲತಾಣಕ್ಕೆ ಚಾಲನೆ ನೀಡಿದ ಅವರು ಆಶೀರ್ವಾದ ನುಡಿಗಳಾಡಿದರು. ಶರಣ ಸಾಹಿತ್ಯವು ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣದ ಆಶಯವನ್ನು ಹೊಂದಿದೆ. ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ ದೊರಕಬೇಕು ಎಂಬ ಕ್ರಾಂತಿಕಾರಿ ಚಿಂತನೆಗಳನ್ನು ಶರಣರು ಪ್ರತಿಪಾದಿಸಿದ್ದಾರೆ. ಮಹಿಳೆಯನ್ನು ಕೇವಲ ಭೌತಿಕ ವಸ್ತುವಿನಂತೆ ಪರಿಗಣಿಸದೆ, ಪುರುಷರಿಗೆ ಸಮಾನವಾದ ಸ್ಥಾನಮಾನ ಮತ್ತು ಗೌರವ ನೀಡಬೇಕು ಎಂಬ ವಿಚಾರವನ್ನು ವಚನ ಸಾಹಿತ್ಯ ಸಾರುತ್ತದೆ ಎಂದು ತಿಳಿಸಿದರು.
ಬಸವಣ್ಣನವರು ಬಾಲ್ಯದಲ್ಲಿಯೇ ತಮ್ಮ ಅಕ್ಕನಿಗ ಉಪನಯನ ಸಂಸ್ಕಾರ ಮಾಡದೆ ತನಗಷ್ಟೇ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಅಕ್ಕನಿಗೆ ದೊರೆಯದ ಧಾರ್ಮಿಕ ಸಂಸ್ಕಾರ ತನಗೂ ಬೇಡ ಎಂಬ ನಿಲುವು ತಳೆದ ಬಸವಣ್ಣನವರ ಈ ಮನೋಭಾವವು ಸಾಮಾಜಿಕ ಸಮಾನತೆಯ ಕ್ರಾಂತಿಕಾರಿ ಪಯಣಕ್ಕೆ ನಾಂದಿಯಾಯಿತು. ಜಾತಿ, ಕಾಯಕ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ವ್ಯವಸ್ಥೆಯ ವಿರುದ್ಧ ಬಸವಣ್ಣನವರು ಹಾಗೂ ಸಮಕಾಲೀನ ಶರಣರು ಧ್ವನಿ ಎತ್ತಿದರು. ಸಮಾಜದ ಅಂಚಿನಲ್ಲಿದ್ದ ಸಮುದಾಯಗಳ ಜನರನ್ನು ಗೌರವದಿಂದ ಸ್ವೀಕರಿಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಮೂಡಿಸುವ ಕಾರ್ಯವನ್ನು ಶರಣ ಸಾಹಿತ್ಯ ಮಾಡಿದೆ ಎಂದರು.
ಸಮಾಜದಲ್ಲಿನ ಮೂಢನಂಬಿಕೆ, ಶೋಷಣೆ, ಅನ್ಯಾಯ ಮತ್ತು ಅವ್ಯವಸ್ಥೆಗಳ ವಿರುದ್ಧ ಹೋರಾಡಿದ ಶರಣರು ಸರಳ ಜೀವನಮೌಲ್ಯಗಳಿಗೆ ಮಹತ್ವ ನೀಡಿದರು. 'ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ಇದೇ ಅಂತರ0ಗ ಶುದ್ದಿ ಬಹಿರಂಗ ಶುದ್ದಿ ಎಂಬ ವಚನದ ಸಂದೇಶವು ಮಕ್ಕಳಲ್ಲಿ ನೈತಿಕ ಪ್ರಜ್ಞೆ ಬಳೆಸಲು ಸಹಕಾರಿಯಾಗಿದೆ. ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು, ಇತರರ ಮನಸ್ಸಿಗ ನೋವುಂಟು ಮಾಡಬಾರದು ಹಾಗೂ ಯಾರನ್ನೂ ಅವಮಾನಿಸಬಾರದು ಎಂಬ ಸಂವಿಧಾನದ ಸಪ್ತ ಸೂತ್ರಗಳ ಮೌಲ್ಯಗಳನ್ನು ಬಾಲ್ಯದಿಂದಲೇ ಕಲಿಸಬೇಕು ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಅವರು ಮಕ್ಕಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಶಾಲಾ-ಕಾಲೇಜುಗಳಿಗ ಭೇಟಿ ನೀಡಿ, ಪ್ರಾಂಶುಪಾಲರ ಸಹಕಾರದೊಂದಿಗ ಮಕ್ಕಳಿಗ ಶರಣರ ವಿಚಾರಧಾರೆಯನ್ನು ಪರಿಚಯಿಸಬೇಕು. ವಚನ ಸಾಹಿತ್ಯವನ್ನು ಪ್ರಾಥಮಿಕ ಹಂತದಿAದಲೇ ಪಠ್ಯಕ್ರಮದಲ್ಲಿ ಅಳವಡಿಸುವ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಆಶಿಸಿದರು.
ವಚನ ಸಾಹಿತ್ಯವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವ, ಮಾನವೀಯತೆ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ವಿಶಿಷ್ಟ ಸಾಹಿತ್ಯವಾಗಿದೆ. ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದ ಮಹತ್ವವನ್ನು ಅರಿತುಕೊಳ್ಳಬೇಕೆಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್, ಸಮಾಜ ಸೇವಕ ಹಾಗೂ ಜಿ.ಡಿ.ಎಸ್.ಮುಖಂಡರ ಸಿ.ಎಂ.ಆರ್. ಶ್ರೀನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಿ.ಗಾಂಜಿ, ಪ್ರಧಾನ ಕಾರ್ಯದರ್ಶಿ ಬಾ.ಹಾ.ಶೇಖರಪ್ಪ, ಉಪಾಧ್ಯಕ್ಷ ಅಶೋಕ್ ಲೋಣಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್